Sunday, 15th December 2024

40 ಬಾಕ್ಸ್‌ಗಳಲ್ಲಿ 8,000 ಜಿಲೆಟಿನ್ ಕಡ್ಡಿಗಳು ಪತ್ತೆ

ತಿರುವನಂತಪುರಂ: ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ 40 ಬಾಕ್ಸ್‌ಗಳಲ್ಲಿ ಬಾಂಬ್ ತಯಾರಿಸಲು ಬಳಸಬಹುದಾದ ಸುಮಾರು 8,000 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪಾಲಕ್ಕಾಡ್ ಜಿಲ್ಲೆಯ ಶೋರ್ನೂರಿನ ಕ್ವಾರಿಯೊಂದರ ಬಳಿ ಬಿಟ್ಟು ಹೋಗಿದ್ದ 40 ಬಾಕ್ಸ್‌ ಗಳಲ್ಲಿ ಬಾಂಬ್ ತಯಾರಿಸಲು ಬಳಸಬಹುದಾದ ಸುಮಾರು 8,000 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ.

ಜಿಲೆಟಿನ್ ಕಡ್ಡಿಗಳನ್ನು ಇಡಲಾಗಿದ್ದ 40 ಬಾಕ್ಸ್‌ಗಳನ್ನು ಸ್ಥಳೀಯರು ಪತ್ತೆ ಮಾಡಿದ್ದಾರೆ. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಎಲ್ಲಾ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕ್ವಾರಿ ಬಳಿ ಸ್ಫೋಟಕ ವಸ್ತು ಗಳನ್ನು ಬಿಟ್ಟು ಹೋದವರ ಪತ್ತೆಗೆ ಪೊಲೀಸರು ಶೋಧಿಸುತ್ತಿದ್ದಾರೆ.

ಸೆಪ್ಟೆಂಬರ್ 2020 ರಲ್ಲಿ, ಎರ್ನಾಕುಲಂನ ಕಾಲಡಿಯಲ್ಲಿ ಕ್ವಾರಿ ಬಳಿಯ ಕಟ್ಟಡದಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಸ್ಫೋಟಕಗಳು ಸ್ಫೋಟಗೊಂಡು ಇಬ್ಬರು ವಲಸೆ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದರು.

2000ನೇ ನವೆಂಬರ್‌ನಲ್ಲಿ ಪಾಲಕ್ಕಾಡ್‌ನ ವಾಲಯಾರ್‌ನ ಬಳಿ ಮಿನಿ ಲಾರಿಯಿಂದ 7,500 ಡಿಟೋನೇಟರ್‌ಗಳು ಮತ್ತು 7,000 ಜಿಲೆಟಿನ್ ಕಡ್ಡಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.