Saturday, 14th December 2024

ಲಂಡನ್‌ನ ವರ್ಷದ ವನ್ಯಜೀವಿ ಛಾಯಾಗ್ರಾಹಕ ಸ್ಪರ್ಧೆಯಲ್ಲಿ 9 ವರ್ಷದ ಭಾರತೀಯ ಬಾಲಕಿ ರನ್ನರ್‌ ಅಪ್‌

Wildlife Photographer

ಲಂಡನ್: ಇಂಗ್ಲೆಂಡ್‌ನ ಲಂಡನ್‌ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ (Natural History Museum-NHM) ಆಯೋಜಿಸಿದ್ದ ಪ್ರತಿಷ್ಠಿತ ವರ್ಷದ ವನ್ಯಜೀವಿ ಛಾಯಾಗ್ರಾಹಕ (Wildlife Photographer of the Year) ಸ್ಪರ್ಧೆಯಲ್ಲಿ 9 ವರ್ಷದ ಭಾರತೀಯ ಬಾಲಕಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ದೆಹಲಿ ಬಳಿಯ ಫರಿದಾಬಾದ್‌ನ 5ನೇ ತರಗತಿ ವಿದ್ಯಾರ್ಥಿನಿ ಶ್ರೇಯೋವಿ ಮೆಹ್ತಾ (Shreyovi Mehta) ಈ ಸಾಧನೆ ಮಾಡಿದ ಬಾಲಕಿ.  ಶ್ರೇಯೋವಿ  ರಾಜಸ್ಥಾನದ ಭರತ್ಪುರದ ಕಿಯೋಲಾದೇವ್ ರಾಷ್ಟ್ರೀಯ ಉದ್ಯಾನವನದ ಕಾಡುಗಳಲ್ಲಿ ತನ್ನ ಹೆತ್ತವರೊಂದಿಗೆ ಬೆಳಿಗ್ಗೆ ವಾಯುವಿಹಾರ ಮಾಡುತ್ತಿದ್ದಾಗ ಕಂಡುಬಂದ ದೃಶ್ಯ ಅದ್ಭುತವಾಗಿ ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಈ ಫೋಟೊ ಇದೀಗ ಪ್ರಶಸ್ತಿಗೆ ಭಾಜನವಾಗಿದೆ.

ಶ್ರೇಯೋವಿ ಮೆಹ್ತಾ ತನ್ನ ಹೆತ್ತವರೊಂದಿಗೆ ಕಾಡಿನ ಮೂಲಕ ನಡೆದುಕೊಂಡು ಹೋಗುತ್ತಿದ್ದಾಗ ಎರಡು ನವಿಲುಗಳನ್ನು ಅಚಾನಕ್ಕಾಗಿ ಕಂಡಿದ್ದಳು. ಬಳಿಕ ತಂದೆಯ ಬಳಿ ತೆರಳಿ  ಕ್ಯಾಮೆರಾ ಪಡೆದು ಕ್ಲಿಕ್‌ ಮಾಡಿದ್ದಳು. ಸದ್ಯ ಈ ಫೋಟೊ ವಿಶ್ವಾದ್ಯಂತ ಮೆಚ್ಚುಗೆ ಪಡೆದಿದೆ.

https://www.instagram.com/p/C_PlWbRtz41/?utm_source=ig_web_copy_link

ʼಇನ್ ದಿ ಸ್ಪಾಟ್‌ಲೈಟ್‌ʼ (In the Spotlight) ಎಂಬ ಶೀರ್ಷಿಕೆಯ ಆಕರ್ಷಕ ಫೋಟೊದಲ್ಲಿ ಮರಗಳ ನೆರಳು ಹರಡಿರುವ ಸ್ಥಳದಲ್ಲಿ ಜೋಡಿ ನವಿಲು ನಿಂತಿರುವುದು ಸೆರೆಯಾಗಿದೆ. ʼʼವನ್ಯಜೀವಿ ಛಾಯಾಗ್ರಹಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರಿಗೆ ನೀಡಲಾಗುವ ಈ ಪ್ರತಿಷ್ಠಿತ ಪ್ರಶಸ್ತಿಯ 60ನೇ ಆವೃತ್ತಿಯ 10 ವರ್ಷದೊಳಗಿನ ವಿಭಾಗದಲ್ಲಿ  ಶ್ರೇಯೋವಿ ಮೆಹ್ತಾ ಎರಡನೇ ಸ್ಥಾನ ಪಡೆದಿದ್ದಾರೆ. ಈ ಸ್ಪರ್ಧೆಯಲ್ಲಿ 117 ದೇಶಗಳ ಛಾಯಾಗ್ರಾಹಕರ  ಭಾಗವಹಿಸಿದ್ದರು. ವಿವಿಧ ವಿಭಾಗಗಳಲ್ಲಿ ಸುಮಾರು 60,000 ಫೋಟೊಗಳು ಸ್ಪರ್ಧೆಗೆ ಬಂದಿದ್ದವುʼʼ ಎಂದು ಪ್ರಕಟಣೆ ತಿಳಿಸಿದೆ.

ಪ್ರಶಸ್ತಿ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಶ್ರೇಯೋವಿ ಮೆಹ್ತಾ ವನ್ಯಜೀವಿ  ಛಾಯಾಗ್ರಹಣ ಕ್ಷೇತ್ರದಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದಾರೆ. ಹೆಣ್ಣು ಮಕ್ಕಳ ಕನಸುಗಳಿಗೆ ಉತ್ತೇಜನ ನೀಡುವಂತೆ ಅವರು ಹೆತ್ತವರಲ್ಲಿ ಮನವಿ ಮಾಡಿದ್ದಾರೆ. “ವನ್ಯಜೀವಿ ಛಾಯಾಗ್ರಹಣದ ಅಭ್ಯಾಸವನ್ನು ಮುಂದುವರಿಸುತ್ತೇನೆ” ಎಂದು ಮೆಹ್ತಾ ಸುದ್ದಿಸಂಸ್ಥೆ ಪಿಟಿಐ ಜತೆ ಮಾತನಾಡುತ್ತ ತಿಳಿಸಿದ್ದಾರೆ. ಅಕ್ಟೋಬರ್ 8ರಂದು ಲಂಡನ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಲ್ಲಿ ನಡೆಯುವ  ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ವನ್ಯಜೀವಿ ಛಾಯಾಗ್ರಾಹಕರ ಫೋಟೊಗಳ ಪ್ರದರ್ಶನವು ಅಕ್ಟೋಬರ್ 11 ರಂದು ಲಂಡನ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಲ್ಲಿ ಪ್ರಾರಂಭವಾಗಲಿದ್ದು, 2025ರ ಜೂನ್ 29ರವರೆಗೆ ಇರಲಿದೆ ಎಂದು ಮೂಲಗಳು ತಿಳಿಸಿವೆ.