Wednesday, 23rd October 2024

Aadhaar: ಸಿಮ್ ಖರೀದಿಗೆ ಆಧಾರ್ ಕಡ್ಡಾಯವೆ? ನಿಯಮ ಏನಿದೆ?

Aadhaar

ಇಂದು ಪ್ರತಿಯೊಂದಕ್ಕೂ ದಾಖಲೆಯ (Identity document) ಗುರುತಾಗಿ ನಾವು ಆಧಾರ್ (Aadhaar) ಕಾರ್ಡ್ ಅನ್ನೇ ಬಳಸುತ್ತಿದ್ದೇವೆ. ಪರ, ವಿರೋಧದ ನಡುವೆಯೂ ಅದು ನಮ್ಮ ಗುರುತಿನ ದಾಖಲೆಯ ಬಹುಮುಖ್ಯ ಭಾಗವಾಗಿದ್ದು ಹೆಚ್ಚಿನವರ ಅರಿವಿಗೆ ಬರಲೇ ಇಲ್ಲ. ಆದರೆ ಇವತ್ತು ಮಾತ್ರ ಎಲ್ಲದಕ್ಕೂ ಆಧಾರ್ ಕಡ್ಡಾಯವೆಂದೇ (Aadhaar Mandatory) ಪರಿಗಣಿಸಲ್ಪಟ್ಟಿದೆ. ಭಾರತದಲ್ಲಿ ವ್ಯಕ್ತಿಯ ಗುರುತನ್ನು ಪರಿಶೀಲಿಸಲು ಆಧಾರ್ ಅತ್ಯಂತ ನಿರ್ಣಾಯಕ ದಾಖಲೆಗಳಲ್ಲಿ ಒಂದಾಗಿದೆ. ಇದು ವ್ಯಕ್ತಿಯ ಬಯೋಮೆಟ್ರಿಕ್ ಮತ್ತು ಜನಸಂಖ್ಯಾ ಡೇಟಾಗೆ ಲಿಂಕ್ ಮಾಡಲಾದ ಅನನ್ಯ 12 ಅಂಕಿಯ ಗುರುತಿನ ಸಂಖ್ಯೆಯಾಗಿ ಕಾರ್ಯನಿರ್ವಹಿಸುತ್ತದೆ.

ಸರ್ಕಾರಿ ಸೇವೆಗಳನ್ನು ಪಡೆಯಲು, ತೆರಿಗೆಗಳನ್ನು ಸಲ್ಲಿಸಲು, ಬ್ಯಾಂಕ್ ಖಾತೆಗಳನ್ನು ತೆರೆಯಲು, ಪಾಸ್‌ಪೋರ್ಟ್‌ಗಳಿಗೆ ಅರ್ಜಿ ಸಲ್ಲಿಸಲು ಮತ್ತು ಮೊಬೈಲ್ ಸಿಮ್ ಕಾರ್ಡ್‌ಗಳನ್ನು ಪಡೆಯಲು ಸೇರಿದಂತೆ ವಿವಿಧ ಅಧಿಕೃತ ಉದ್ದೇಶಗಳಿಗೆ ಆಧಾರ್ ಇವತ್ತು ಅತ್ಯಗತ್ಯ. ಇದರ ವ್ಯಾಪಕ ಬಳಕೆಯು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಸುವ್ಯವಸ್ಥಿತಗೊಳಿಸಲು ಮತ್ತು ಸಾರ್ವಜನಿಕ ಸೇವೆ ವಿತರಣೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ನೀಡುವುದನ್ನು ಖಚಿತ ಪಡಿಸಿದೆ.

ಮೊಬೈಲ್ ಸಂಪರ್ಕಕ್ಕೆ ಆಧಾರ್ ಕಡ್ಡಾಯವೇ?

ಸದ್ಯ ಭಾರತದಲ್ಲಿ ಮೊಬೈಲ್ ಸಿಮ್ ಪಡೆಯಲು ಆಧಾರ್ ಕಡ್ಡಾಯವಲ್ಲ. ಆದರೆ ಗ್ರಾಹಕರನ್ನು ತಿಳಿಯುವ ಪ್ರಕ್ರಿಯೆಯಾದ ಕೆವೈಸಿಗೆ ಇದು ಕಡ್ಡಾಯ ಗುರುತಿನ ಪುರಾವೆಗಳಲ್ಲಿ ಒಂದಾಗಿದೆ.

ಯುಐಐಡಿಎಐ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಮೊಬೈಲ್ ಸಂಪರ್ಕವನ್ನು ಪಡೆಯಲು ಆಧಾರ್ ಕಡ್ಡಾಯವಲ್ಲ. ಆದರೆ ಟೆಲಿಗ್ರಾಫ್ ಆಕ್ಟ್ 1885ರ ತಿದ್ದುಪಡಿಗಳ ಅಡಿಯಲ್ಲಿ ಟೆಲಿಕಾಂ ಬಳಕೆದಾರರು ತಮ್ಮ ಆಧಾರ್ ಸಂಖ್ಯೆಯನ್ನು ಹೊಸ ಸಿಮ್ ಕಾರ್ಡ್ ಪಡೆಯಲು ದೃಢೀಕರಣದೊಂದಿಗೆ ಕೆವೈಸಿ ದಾಖಲೆಯಾಗಿ ಸ್ವಯಂ ಪ್ರೇರಣೆಯಿಂದ ಬಳಸಬಹುದು.

Aadhaar

ಗ್ರಾಹಕರ ಸುರಕ್ಷತೆ ಮತ್ತು ರಾಷ್ಟ್ರದ ಭದ್ರತೆಗಾಗಿ ಆಧಾರ್‌ನಂತಹ ವಿಶ್ವಾಸಾರ್ಹ ಗುರುತಿಸುವಿಕೆಯನ್ನು ಬಳಸಿಕೊಂಡು ಎಲ್ಲಾ ಮೊಬೈಲ್ ಚಂದಾದಾರರ ಗುರುತನ್ನು ಪರಿಶೀಲಿಸಲು ಶಿಫಾರಸು ಮಾಡಲಾಗಿದೆ. ಇದು ದುರುಪಯೋಗವನ್ನು ತಡೆಯಲು ಸಹಾಯ ಮಾಡುತ್ತದೆ. ಯಾಕೆಂದರೆ ಅನೇಕ ಅಪರಾಧಿಗಳು ಮತ್ತು ಭಯೋತ್ಪಾದಕರು ನಕಲಿ ಗುರುತುಗಳನ್ನು ಬಳಸಿ ಅಥವಾ ವಂಚನೆ ಮತ್ತು ಇತರ ಅಪರಾಧಗಳನ್ನು ಮಾಡಲು ಇನ್ನೊಬ್ಬರ ಹೆಸರಿನಲ್ಲಿ ನಕಲಿ ಸಿಮ್ ಕಾರ್ಡ್‌ಗಳನ್ನು ಪಡೆಯುತ್ತಾರೆ.

ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿದಾಗ ಮತ್ತು ಆಧಾರ್‌ಗೆ ಲಿಂಕ್ ಮಾಡಿದಾಗ ವಂಚಕರು, ಅಪರಾಧಿಗಳು ಮತ್ತು ಭಯೋತ್ಪಾದಕರನ್ನು ಪತ್ತೆ ಹಚ್ಚುವುದು ಸುಲಭವಾಗುತ್ತದೆ. ಆಧಾರ್ ಪರಿಶೀಲನೆಯ ಸಮಯದಲ್ಲಿ ಸಂಗ್ರಹಿಸಿದ ಬಯೋಮೆಟ್ರಿಕ್‌ಗಳನ್ನು ಬಳಸಲು ಮೊಬೈಲ್ ಫೋನ್ ಕಂಪನಿಗಳು ಸೇರಿದಂತೆ ಇತರರಿಗೆ ಅನುಮತಿಸಲಾಗುವುದಿಲ್ಲ ಎಂದು ಯುಐಐಡಿಎಐ ಸ್ಪಷ್ಟಪಡಿಸಿದೆ.

ಒಮ್ಮೆ ಫಿಂಗರ್‌ಪ್ರಿಂಟ್ ಸೆನ್ಸರ್‌ನಲ್ಲಿ ಬೆರಳನ್ನು ಇರಿಸಿದರೆ ಬಯೋಮೆಟ್ರಿಕ್ ಡೇಟಾವನ್ನು ತಕ್ಷಣವೇ ಎನ್‌ಕ್ರಿಪ್ಟ್ ಮಾಡಲಾಗುತ್ತದೆ ಮತ್ತು ಪರಿಶೀಲನೆ ಉದ್ದೇಶಗಳಿಗಾಗಿ ಯುಐಐಡಿಎಐಗೆ ಸುರಕ್ಷಿತವಾಗಿ ರವಾನಿಸಲಾಗುತ್ತದೆ.

Inflation Impacts: ಹಣದುಬ್ಬರದ ಎಫೆಕ್ಟ್‌; ಈಗಿನ 1 ಕೋಟಿ ರೂ. ಮೌಲ್ಯ 30 ವರ್ಷಗಳ ಬಳಿಕ ಕೇವಲ 17 ಲಕ್ಷ ರೂ!

ಎಷ್ಟು ಸಿಮ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಬಹುದು?

ದೂರಸಂಪರ್ಕ ಇಲಾಖೆ (DoT) ಮಾರ್ಗಸೂಚಿಗಳ ಪ್ರಕಾರ ಒಬ್ಬರ ಹೆಸರಿನಲ್ಲಿ ಒಂಬತ್ತು ಮೊಬೈಲ್ ಸಂಖ್ಯೆಗಳನ್ನು ನೋಂದಾಯಿಸಿಕೊಳ್ಳಬಹುದು.