Sunday, 15th December 2024

Aam Aadmi Party : ಆಪ್‌ನ ಅಂತಿಮ ಪಟ್ಟಿ ರಿಲೀಸ್‌- 20 ಹಾಲಿ ಶಾಸಕರಿಗೆ ಕೋಕ್‌; ಯಾವ ಕ್ಷೇತ್ರದಿಂದ ಕೇಜ್ರಿವಾಲ್‌ ಸ್ಪರ್ಧೆ?

Aam Aadmi Party 

ನವದೆಹಲಿ: ಮುಂಬರಲಿರುವ ದೆಹಲಿ ವಿಧಾನಸಭಾ ಚುನಾವಣೆಗಾಗಿ (Delhi Assembly Election) ಎಲ್ಲ ಪಕ್ಷಗಳೂ ಸಿದ್ದತೆಯನ್ನು ನಡೆಸುತ್ತಿವೆ. ಇದೀಗ ಆಮ್‌ ಆದ್ಮಿ ( Aam Aadmi Party) ಪಕ್ಷ ಅಭ್ಯರ್ಥಿಗಳ ನಾಲ್ಕನೇ ಹಾಗೂ ಅಂತಿಮ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ (Arvind Kejriwal)  ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಮುಖ್ಯಮಂತ್ರಿ ಅತಿಶಿ (CM Atishi) ಮತ್ತೊಮ್ಮೆ ಕಲ್ಕಾಜಿಯಿಂದ ಸ್ಪರ್ಧಿಸಲಿದ್ದಾರೆ. ಸೌರಭ್ ಭಾರದ್ವಾಜ್ ಗ್ರೇಟರ್ ಕೈಲಾಶ್ ಸ್ಪರ್ಧೆ ಮಾಡಲಿದ್ದಾರೆ.

ಎಎಪಿ ತನ್ನ ಪ್ರಸ್ತುತ ಕಸ್ತೂರ್ಬಾ ನಗರದ ಶಾಸಕ ಮದನ್ ಲಾಲ್ ಬದಲಿಗೆ ರಮೇಶ್ ಪೆಹಲ್ವಾನ್ ಅವರನ್ನು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ರಮೇಶ್ ಪೆಹಲ್ವಾನ್ ಮತ್ತು ಅವರ ಪತ್ನಿ, ಕೌನ್ಸಿಲರ್ ಕುಸುಮ್ ಲತಾ ಅವರು ಬಿಜೆಪಿ ತೊರೆದು ಇಂದು ಮುಂಜಾನೆ ಎಎಪಿ ಸೇರಿದ್ದಾರೆ.

ಬಾಬರ್‌ಪುರದಿಂದ ನಾಮನಿರ್ದೇಶನಗೊಂಡಿರುವ ಗೋಪಾಲ್ ರೈ, ಓಖ್ಲಾದಿಂದ ಅಮಾನತುಲ್ಲಾ ಖಾನ್ ಮತ್ತು ಶಕುರ್ ಬಸ್ತಿಯಿಂದ ಸತ್ಯೇಂದ್ರ ಕುಮಾರ್ ಜೈನ್ ಈ ಬಾರಿಯೂ ಕೂಡ ಸ್ಪರ್ಧೆ ಮಾಡಲಿದ್ದಾರೆ. ನವದೆಹಲಿ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ಅವರ ಪುತ್ರ ಸಂದೀಪ್‌ ದೀಕ್ಷಿತ್‌ ಅವರು ಕಾಂಗ್ರೆಸ್‌ನಿಂದ ಕಣಕ್ಕಿಳಿಯಲಿದ್ದಾರೆ. ಅವರು ಅರವಿಂದ್‌ ಕೇಜ್ರಿವಾಲ್‌ ಅವರಿಗೆ ತೀವ್ರ ಪೈಪೋಟಿ ನೀಡಬಹುದು ಎಂದು ಹೇಳಲಾಗುತ್ತಿದೆ. ಮೂರು ಬಾರಿ ದೆಹಲಿ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ಅವರು ಈ ಹಿಂದೆ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಸ್ಪರ್ಧೆ ಮಾಡಿ ಸೋತಿದ್ದರು. ಈ ಬಾರಿ ಅವರ ಪುತ್ರನನ್ನು ಕಣದಲ್ಲಿದ್ದಾರೆ.

20 ಶಾಸಕರಿಗೆ ಟಿಕೆಟ್ ನಿರಾಕರಿಸಿದ ಆಪ್

ಚುನಾವಣೆಯಲ್ಲಿ ಸ್ಪರ್ಧಿಸಲು ಆಮ್ ಆದ್ಮಿ ಪಕ್ಷ ತನ್ನ 20 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದೆ. ಅವರಲ್ಲಿ, ಮೂವರು ಶಾಸಕರು ತಮ್ಮ ಕುಟುಂಬದ ಸದಸ್ಯರನ್ನು-ಪುತ್ರರು ಮತ್ತು ಪತ್ನಿಯರನ್ನು-ನಾಮನಿರ್ದೇಶನ ಮಾಡಿದ್ದಾರೆ. ಎಸ್.ಕೆ.ಬಗ್ಗಾ ಅವರ ಪುತ್ರ ವಿಕಾಸ್ ಬಗ್ಗ ಕೃಷ್ಣನಗರದಿಂದ, ಪ್ರಹ್ಲಾದ್ ಸಾಹ್ನಿ ಅವರ ಪುತ್ರ ಪುರಾನ್ ದೀಪ್ ಸಾಹ್ನಿ ಚಾಂದಿನಿ ಚೌಕ್‌ನಿಂದ, ಹಾಗೂ ನರೇಶ್ ಬಲ್ಯಾನ್ ಅವರ ಪತ್ನಿ ಪೂಜಾ ಬಲ್ಯಾನ್ ಉತ್ತಮ ನಗರದಿಂದ ಸ್ಪರ್ಧಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಎಎಪಿಯ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ, 11 ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿತ್ತು. ಅವರಲ್ಲಿ ಆರು ಮಂದಿ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಪಕ್ಷಕ್ಕೆ ಸೇರಿದ ನಾಯಕರಿಗೆ ಟಿಕೆಟ್‌ ನೀಡಿದೆ. ಎರಡನೇ ಪಟ್ಟಿಯಲ್ಲಿ ಪಕ್ಷವು 15 ಹಾಲಿ ಶಾಸಕರನ್ನು ಕೈಬಿಟ್ಟು, ಅವರ ಸ್ಥಾನಕ್ಕೆ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ನಾಯಕರನ್ನು ನೇಮಿಸಲಾಗಿದೆ.

ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಿದ ನಂತರ, ಅರವಿಂದ್ ಕೇಜ್ರಿವಾಲ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಇಂದು, ಆಮ್ ಆದ್ಮಿ ಪಕ್ಷವು ಎಲ್ಲಾ 70 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಪಕ್ಷವು ಸಂಪೂರ್ಣ ಆತ್ಮವಿಶ್ವಾಸ ಮತ್ತು ಸಂಪೂರ್ಣ ಸಿದ್ಧತೆಯೊಂದಿಗೆ ಚುನಾವಣೆಯನ್ನು ಎದುರಿಸುತ್ತಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ : Arvind Sawant: ಮಹಿಳಾ ಅಭ್ಯರ್ಥಿಯನ್ನು ಸರಕಿಗೆ ಹೋಲಿಸಿದ ಶಿವಸೇನೆ ಯುಬಿಟಿ ನಾಯಕ ಅರವಿಂದ್‌ ಸಾವಂತ್‌; ನೆಟ್ಟಿಗರಿಂದ ತರಾಟೆ