Sunday, 15th December 2024

ಅವಹೇಳನಕಾರಿ ಹೇಳಿಕೆ: ಗುಜರಾತ್ ಆಪ್ ಪಕ್ಷದ ಸಂಚಾಲಕ ಬಂಧನ

ವದೆಹಲಿ: ಮಹಿಳೆಯರ ಕುರಿತು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಗುಜರಾತ್ ಆಮ್ ಆದ್ಮಿ ಪಕ್ಷದ ಸಂಚಾಲಕ ಗೋಪಾಲ್ ಇಟಾಲಿಯಾ ಅವರನ್ನು ಗುರುವಾರ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದೆಹಲಿಯಲ್ಲಿರುವ ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಗೋಪಾಲ್ ಬೆಳಿಗ್ಗೆ ವಿಚಾರಣೆಗೆ ಹಾಜರಾಗಿದ್ದರು. ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರ ಆದೇಶದ ಮೇಲೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ನ್ಯಾಯಾಧೀಶರ ಮುಂದೆ ಗೋಪಾಲ್ ಅವರನ್ನು ಹಾಜರುಪಡಿಸಿ ಬಂಧನಕ್ಕೆ ಒಳಪಡಿಸ ಬಹುದು ಎನ್ನಲಾಗಿದೆ. ಸುದ್ದಿ ತಿಳಿದು ನೂರಾರು ಎಎಪಿ ಕಾರ್ಯಕರ್ತರು ಆಯೋಗದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಇತ್ತೀಚೆಗೆ ಗೋಪಾಲ್ ಅವರು ನರೇಂದ್ರ ಮೋದಿ ಅವರನ್ನು ನೀಚ ರಾಜಕಾರಣಿ ಎಂದು ಜರಿದಿದ್ದರು ಹಾಗೂ ಮಹಿಳೆಯರು ದೇವಸ್ಥಾನಕ್ಕೆ ಹೋಗಬಾರದು ಎಂದು ಹೇಳಿದ್ದ ವಿಡಿಯೊಗಳು ವೈರಲ್ ಆಗಿದ್ದವು.

ನಾನೊಬ್ಬ ಪಾಟಿದಾರ ಸಮುದಾಯದವನು ಎಂದು ನನ್ನ ಮೇಲೆ ಹಗೆ ಸಾಧಿಸುತ್ತಿದೆ ಎಂದು ಗೋಪಾಲ್ ಇಟಾಲಿಯಾ ತಿಳಿಸಿದ್ದಾರೆ.

ಗುಜರಾತ್ ವಿಧಾನಸಭೆ ಚುನಾವಣೆ ಸದ್ಯದಲ್ಲೇ ಘೋಷಣೆಯಾಗಲಿದ್ದು, ಎಎಪಿ ಪಕ್ಷ ಕೂಡ ಭರ್ಜರಿ ತಯಾರಿ ನಡೆಸುತ್ತಿದೆ.