Sunday, 15th December 2024

ಛತ್ತೀಸಗಢಕ್ಕೆ ಎರಡು ದಿನಗಳ ಆಪ್ ಸಚಿವರ ಪ್ರವಾಸ

ನವದೆಹಲಿ: ಪಂಜಾಬ್‌ನಲ್ಲಿ ಜಯಭೇರಿ ಬಾರಿಸಿದ ನಂತರ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಛತ್ತೀಸಗಢದ ಮೇಲೆ ಕಣ್ಣಿಟ್ಟಿದೆ. ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ.

ಎಎಪಿ ಹಿರಿಯ ನಾಯಕ ಮತ್ತು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಭಾನುವಾರ ಛತ್ತೀಸಗಡಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಎಎಪಿ ಪೂರ್ವಾಂಚಲ ವಿಭಾಗದ ಉಸ್ತುವಾರಿ ಮತ್ತು ಬುರಾರಿ ಶಾಸಕ ಸಂಜೀವ್ ಝಾ ಕೂಡ ಗೋಪಾಲ್ ರೈ ಜೊತೆಗೆ ಛತ್ತೀಸಗಡಕ್ಕೆ ತೆರಳಲಿದ್ದಾರೆ. ಭಾನುವಾರ ಛತ್ತೀಸ್‌ಗಡದ ರಾಜಧಾನಿ ರಾಯ ಪುರದಲ್ಲಿ ಪಕ್ಷದ ರಾಜ್ಯ ಕಚೇರಿ ಉದ್ಘಾಟಿಸಲಿದ್ದಾರೆ.

ಪಂಜಾಬ್‌ನಲ್ಲಿ ಪಕ್ಷದ ಅದ್ಭುತ ಗೆಲುವು ಮತ್ತು ಛತ್ತೀಸಗಡಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಪರ್ಯಾಯವಾಗಿ ತಮ್ಮನ್ನು ತಾವು ಬಿಂಬಿಸಿಕೊಳ್ಳಲು ರಾಯಪುರದಲ್ಲಿ ವಿಜಯ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.

ಛತ್ತೀಸ್‌ಗಡ ಪ್ರತ್ಯೇಕ ರಾಜ್ಯವಾಗಿ ರಚನೆಯಾದ ನಂತರ 15 ವರ್ಷ ಆಡಳಿತ ನಡೆಸಿದ ಬಿಜೆಪಿ ಕೊಟ್ಟ ಭರವಸೆಗಳನ್ನು ಈಡೇರಿ ಸಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನರು ಬದಲಾವಣೆ ಬಯಸಿ ಕಾಂಗ್ರೆಸ್‌ಗೆ ಮತ ನೀಡಿದ್ದಾರೆ. ಇದುವರೆಗಿನ ತನ್ನ ಮೂರೂ ವರೆ ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್ ಕೂಡ ರಾಜ್ಯದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

2018 ರಲ್ಲಿ ಎಎಪಿ ಛತ್ತೀಸ್‌ಗಡ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 90 ಸ್ಥಾನಗಳ ಪೈಕಿ 85 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಿತ್ತು.