Thursday, 12th December 2024

ಎಎಪಿ ಪಕ್ಷದ ಪ್ರಚಾರದ ಹಾಡಿಗೆ ಚುನಾವಣಾ ಆಯೋಗದಿಂದ ನಿಷೇಧ: ಆರೋಪ

ವದೆಹಲಿ: ಪಕ್ಷದ ಪ್ರಚಾರದ ಹಾಡಿಗೆ ಚುನಾವಣಾ ಆಯೋಗ ನಿಷೇಧ ಹೇರಿದೆ ಎಂದು ಆಮ್ ಆದ್ಮಿ ಪಕ್ಷ ಭಾನುವಾರ ಆರೋಪಿಸಿದೆ.

ಎಎಪಿ ಇತ್ತೀಚೆಗಷ್ಟೇ ‘ಜೈಲ್ ಕೆ ಜವಾಬ್ ಮೇ ಹಮ್ ವೋಟ್ ದೇಂಗೆ’ ಎಂಬ ಚುನಾವಣಾ ಪ್ರಚಾರ ಹಾಡನ್ನು ಬಿಡುಗಡೆಗೊಳಿಸಿತ್ತು. ಇದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಕೇಂದ್ರ ತನಿಖಾ ಸಂಸ್ಥೆಗಳನ್ನು ಕೆಟ್ಟದಾಗಿ ಬಿಂಬಿಸುತ್ತಿದೆ ಎಂದು ಹೇಳಿ ಹಾಡಿಗೆ ಚುನಾವಣಾ ಆಯೋಗ ನಿಷೇಧ ಹೇರಿರುವುದಾಗಿ ಎಎಪಿ ಹೇಳಿಕೊಂಡಿದೆ.

ಎಎಪಿ ಆರೋಪಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಎಎಪಿ ನಾಯಕಿ ಅತಿಶಿ, ‘ಬಹುಶಃ ಇದೇ ಮೊದಲ ಬಾರಿ ಪಕ್ಷವೊಂದರ ಪ್ರಚಾರದ ಹಾಡಿಗೆ ಚುನಾವಣಾ ಆಯೋಗ ನಿಷೇಧ ಹೇರಿದೆ’ ಎಂದು ಹೇಳಿದ್ದಾರೆ.

‘ಹಾಡಿನಲ್ಲಿ ಬಿಜೆಪಿಯನ್ನು ಉಲ್ಲೇಖಿಸಿಲ್ಲ. ಅಲ್ಲದೆ ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿಲ್ಲ. ವಾಸ್ತವಿಕ ವಿಡಿಯೊ ಮತ್ತು ಘಟನೆಗಳನ್ನು ಮಾತ್ರ ಆಧರಿಸಿವೆ’ ಎಂದು ಹೇಳಿದ್ದಾರೆ.

ನೀತಿ ಸಂಹಿತೆ ಉಲ್ಲಂಘಿಸಿದ ಬಿಜೆಪಿ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳುವಂತೆ ನಾನು ಒತ್ತಾಯಿಸುತ್ತೇನೆ. ವಿರೋಧ ಪಕ್ಷಗಳ ಪ್ರಚಾರಕ್ಕೆ ತಡೆ ಒಡ್ಡಬೇಡಿ’ ಎಂದು ಮನವಿ ಮಾಡಿದ್ದಾರೆ.

ಎರಡು ನಿಮಿಷಗಳ ಪ್ರಚಾರದ ಹಾಡನ್ನು ಎಎಪಿ ಶಾಸಕ ದಿಲೀಪ್ ಪಾಂಡೆ ಹಾಡಿದ್ದಾರೆ. ಗುರುವಾರ ಇದನ್ನು ಬಿಡುಗಡೆಗೊಳಿಸಲಾಗಿತ್ತು.