Sunday, 15th December 2024

ರಾಜ್ಯಸಭೆಗೆ ಟೊಮೆಟೊ, ಶುಂಠಿಯ ಹಾರ ಧರಿಸಿ ಬಂದ ಸಂಸದ

ವದೆಹಲಿ: ಬೆಲೆ ಏರಿಕೆ ವಿರುದ್ಧ ಪ್ರತಿಭಟನಾರ್ಥವಾಗಿ ಆಮ್ ಆದ್ಮಿ ಪಕ್ಷದ ಸಂಸದ ಸುಶೀಲ್ ಕುಮಾರ್‌ ಗುಪ್ತಾ ಅವರು ರಾಜ್ಯಸಭೆಗೆ ಟೊಮೆಟೊ ಹಾಗೂ ಶುಂಠಿಯ ಹಾರವನ್ನು ಧರಿಸಿ ಬಂದರು.

ಅವರ ಈ ವರ್ತನೆಗೆ ಸಭಾಧ್ಯಕ್ಷ ಜಗದೀಪ್‌ ಧನಕರ್‌ ಅವರು ತೀವ್ರ ಆಕ್ಷೇಪ ವ್ಯಕ್ತಡಿಸಿದರಲ್ಲದೆ, ಇದರಿಂದ ಭಾರಿ ನೋವುಂಟಾಗಿದೆ ಎಂದು ನುಡಿದರು.

ರಾಜ್ಯಸಭೆಯಲ್ಲಿ ಕೆಲವು ಅಧಿಕೃತ ದಾಖಲೆಗಳನ್ನು ಮಂಡಿಸುವಾಗ ಗುಪ್ತಾ ಅವರು ಟೊಮೆಟೊ ಹಾಗೂ ಶುಂಠಿಯ ಹಾರ ಧರಿಸಿ ಸದನಕ್ಕೆ ಪ್ರವೇಶಿಸಿದರು.

ಈ ವೇಳೆ ಎದ್ದು ನಿಂತ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಮುಂಬೈನಲ್ಲಿ ಕ್ವಿಟ್‌ ಇಂಡಿಯಾ ಸಮಾರಂಭದಲ್ಲಿ ಭಾಗಿಯಾಗಲು ಹೊರಟಿದ್ದ ಮಹಾತ್ಮಾ ಗಾಂಧೀಜಿ ಅವರ ಮೊಮ್ಮಗ ತುಷಾರ್‌ ಗಾಂಧಿ ಅವರ ಬಂಧನದ ಬಗ್ಗೆ ಉಲ್ಲೇಖಿಸಿದರು.

‘ನೀವು ಕ್ವಿಟ್ ಇಂಡಿಯಾ ಚಳವಳಿಯನ್ನು ಉಲ್ಲೇಖಿಸಿದ್ದೀರಿ. ನಾವು ಎರಡು ನಿಮಿಷ ಮೌನಾಚರಣೆ ಮಾಡಿದೆವು. ಆದರೆ ತುಷಾರ್ ಗಾಂಧಿಯನ್ನು  ಬಂಧಿಸ ಲಾಗಿದೆ’ ಎಂದು ಖರ್ಗೆ ಹೇಳಿದರು. ಮುಂದೆ ಮಾತನಾಡಲು ಖರ್ಗೆ ಅವರಿಗೆ ಸಭಾಪತಿಗಳು ಅವಕಾಶ ನಿರಾಕರಿಸಿದರು. ಖರ್ಗೆಯವರು ಮಾತು ಮುಂದುವರಿಸಲು ಮುಂದಾದಾಗ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದರು.

ಗದ್ದಲ ನಡುವೆಯೇ ಗುಪ್ತಾ ಅವರನ್ನು ಗಮನಿಸಿದ ಧನಕರ್‌ ಅವರು, ಟೊಮೆಟೊ ಹಾರ ಧರಿಸಿದ್ದಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಆಮ್‌ ಆದ್ಮಿ ಪಾರ್ಟಿ, ‘ಮೋದಿಯ ಹಣದುಬ್ಬರ ಜನರ ರಕ್ತ ಹೀರುತ್ತಿದೆ. ಮೋದಿ ಸರ್ಕಾರದ ಗಮನ ಸೆಳೆಯಲು ಟೊಮೆಟೊ ಹಾಗೂ ಶುಂಠಿಯ ಹಾರ ಧರಿಸಿ ಸಂಸದರು ಸದನಕ್ಕೆ ಆಗಮಿಸಿದರು’ ಎಂದಿದೆ.