Friday, 22nd November 2024

Delhi Chief Minister : ಪ್ರಮಾಣ ವಚನ ಸ್ವೀಕರಿಸಿದ ಡೆಲ್ಲಿ ನೂತನ ಸಿಎಂ ಆತಿಶಿ

Delhi Chief Minister

ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕಿ ಅತಿಶಿ ದೆಹಲಿಯ 8ನೇ ಮುಖ್ಯಮಂತ್ರಿಯಾಗಿ (Delhi Chief Minister) ಶನಿವಾರ ರಾಜ್ ನಿವಾಸದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮದ್ಯ ನೀತಿ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾದ ಒಂದು ವಾರದ ಬಳಿಕ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ ಶಾಸಕಾಂಗ ಪಕ್ಷದ ಸಭೆಯಲ್ಲಿ ಆತಿಶಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಲಾಗಿತ್ತು. ಹೀಗಾಗಿ ಆತಿಶಿ ಅರವಿಂದ್ ಕೇಜ್ರಿವಾಲ್ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

ಅವರೊಂದಿಗೆ ಐದು ಕ್ಯಾಬಿನೆಟ್ ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅದರಲ್ಲಿ ಹಿಂದಿನ ಸಚಿವಾಲಯದ ನಾಲ್ವರು ಮತ್ತು ಹೊಸ ಮುಖವೊಂದು ಸೇರಿಕೊಂಡಿದೆ. ಅತಿಶಿ ಅವರ ಹೊಸ ಮಂತ್ರಿಮಂಡಲದಲ್ಲಿ ಗೋಪಾಲ್ ರಾಯ್, ಕೈಲಾಶ್ ಗೆಹ್ಲೋಟ್, ಸೌರಭ್ ಭಾರದ್ವಾಜ್, ಇಮ್ರಾನ್ ಹುಸೇನ್ ಮತ್ತು ಸುಲ್ತಾನ್ಪುರ್ ಮಜ್ರಾದಿಂದ ಮೊದಲ ಬಾರಿಗೆ ಶಾಸಕರಾಗಿರುವ ಮುಖೇಶ್ ಅಹ್ಲಾವತ್ ಸೇರಿದ್ದಾರೆ.

ಕೇಜ್ರಿವಾಲ್ ಸರ್ಕಾರದಲ್ಲಿ ಅತಿಶಿ ಹಣಕಾಸು, ಕಂದಾಯ, ಪಿಡಬ್ಲ್ಯೂಡಿ, ವಿದ್ಯುತ್ ಮತ್ತು ಶಿಕ್ಷಣ ಸೇರಿದಂತೆ 13 ಖಾತೆಗಳನ್ನು ನಿರ್ವಹಿಸಿದ್ದರು.

ಅಬಕಾರಿ ನೀತಿ ಪ್ರಕರಣದಲ್ಲಿ ಐದು ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದ ಕೇಜ್ರಿವಾಲ್ ಸೆಪ್ಟೆಂಬರ್ 13 ರಂದು ತಿಹಾರ್ ಜೈಲಿನಿಂದ ಹೊರಬಂದಿದ್ದರು. ಸುಪ್ರೀ ಕೋರ್ಟ್ ಅವರಿಗೆ ಜಾಮೀನು ನೀಡಿತ್ತು. ಜೈಲು ಸೇರಿದ ತಕ್ಷಣವೇ ರಾಜೀನಾಮೆ ಕೊಡದೇ ಹಠ ಕಟ್ಟಿದ್ದ ಸೆಪ್ಟೆಂಬರ್ 17ರಂದು ಆಶ್ಚರ್ಯಕರ ರೀತಿಯಲ್ಲಿ ತಮ್ಮ ರಾಜೀನಾಮೆ ಘೋಷಿಸಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಜನರಿಂದ “ಪ್ರಾಮಾಣಿಕತೆಯ ಪ್ರಮಾಣಪತ್ರ” ಪಡೆದ ನಂತರವೇ ಹುದ್ದೆಗೆ ಮರಳುವುದಾಗಿ ಹೇಳಿದ್ದರು.

ಇದನ್ನೂ ಓದಿ: Tirupati Laddu Row: ತಿರುಪತಿ ಲಡ್ಡು ವಿವಾದ; ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕರಿಂದ ಶಾಕಿಂಗ್‌ ಮಾಹಿತಿ ಬಹಿರಂಗ

ಎಎಪಿಯ ಶಾಸಕಾಂಗ ಪಕ್ಷವು ನಂತರ ಅತಿಶಿಯನ್ನು ಹೊಸ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿತ್ತು. ಇದು ಕೇಜ್ರಿವಾಲ್ ಮುಂದಿಟ್ಟ ಪ್ರಸ್ತಾಪವಾಗಿದೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಅತಿಶಿ ಸರ್ಕಾರದ ಅಧಿಕಾರಾವಧಿ ಸಂಕ್ಷಿಪ್ತವಾಗಿರುತ್ತದೆ.