Friday, 22nd November 2024

ಪೊಲೀಸ್ ಬಸ್ಸಿಗೆ ಬೈಕ್ ಡಿಕ್ಕಿ: ಇಂಧನ ಟ್ಯಾಂಕ್ ಸ್ಫೋಟ, ಮೂವರ ಸಾವು

ಸರನ್: ಪೊಲೀಸ್ ಬಸ್ಸಿಗೆ ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದು ಈ ವೇಳೆ ಬೈಕ್ ನ ಇಂಧನ ಟ್ಯಾಂಕ್ ಸ್ಫೋಟ ಗೊಂಡು ಬೆಂಕಿ ಹೊತ್ತಿಕೊಂಡು ಮೂವರು ಮೃತಪಟ್ಟಿದ್ದಾರೆ.
ಮಂಗಳವಾರ ಸಂಜೆ ಸರನ್ ಜಿಲ್ಲೆಯ ರೆವೆಲ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-531 ರ ಡಿಯೋರಿಯಾ ಗ್ರಾಮದ ಬಳಿ ಈ ಘಟನೆ ನಡೆದಿದೆ. ಅಪಘಾತದ ವೇಳೆ ಬೈಕ್ ಬಸ್ಸಿನ ಕೆಳಗೆ ಸಿಲುಕಿಕೊಂಡಿದ್ದು ಒಂದೆರೆಡು ಮೀಟರ್ ದೂರಕ್ಕೆ ಎಳೆದುಕೊಂಡು ಹೋಗಿದೆ.

ಮೃತರನ್ನು ಪಂಚಭಿಂಡಾ ಗ್ರಾಮದ ನಿವಾಸಿಗಳಾದ 22 ವರ್ಷದ ಕುಂದನ್ ಮಾಂಝಿ, 25 ವರ್ಷದ ಬುಲ್ಬುಲ್ ಮಾಂಝಿ ಮತ್ತು 24 ವರ್ಷದ ಕಿಶೋರ್ ಮಾಂಝಿ ಎಂದು ಗುರುತಿಸಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾಗವಹಿಸಿದ್ದ ಜಯಪ್ರಕಾಶ್ ನಾರಾಯಣ್ ಅವರ 120ನೇ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮಕ್ಕೆ ನಿಯೋಜಿಸಲಾಗಿದ್ದ ಸಿತಾಬ್ ಡಿಯಾರಾದಿಂದ ಪೊಲೀಸ್ ಸಿಬ್ಬಂದಿ ಹಿಂತಿರುಗುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಪೊಲೀಸರಿಗೆ ಗಾಯಗಳಾಗಿಲ್ಲ ಎಂದು ಅವರು ತಿಳಿಸಿದ್ದಾರೆ.