Saturday, 14th December 2024

ಸೋಲಿನಲ್ಲೂ ಶತಕ ದಾಖಲಿಸುವ ಉತ್ಸಾಹದಲ್ಲಿ ಬರೇಲಿಯ ಅಭ್ಯರ್ಥಿ!

ನವದೆಹಲಿ: ಈ ವ್ಯಕ್ತಿಗೆ ಇಲ್ಲಿಯವರೆಗೆ 94 ಬಾರಿ ಸೋತಿದ್ದರೂ ಚುನಾವಣೆಯಲ್ಲಿ ಸ್ಪರ್ಧಿಸುವ ಉತ್ಸಾಹ ಇನ್ನೂ ಕಡಿಮೆಯಾಗಿಲ್ಲ.

ಹಸ್ನೂರಾಮ್ ಅಂಬೇಡ್ಕರ್ ಎಂಬ ವ್ಯಕ್ತಿ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ. ಇವರು ಈವರೆಗೆ ಸ್ಪರ್ಧಿಸಿದ ಎಲ್ಲಾ ಚುನಾವಣೆಗಳಲ್ಲಿ ಸೋಲು ಕಂಡಿದ್ದಾರೆ. ಹಸ್ನೂರಾಮ್ ಅವರು ಶೀಘ್ರವೇ ಚುನಾವಣೆಯಲ್ಲಿ ಸೋಲಿನ ಶತಕ ಭಾರಿಸುವ ಹುಮ್ಮಸ್ಸಿನಲ್ಲಿದ್ದಾರೆ.

ಹಸ್ನೂರಾಮ್ ಅಂಬೇಡ್ಕರ್ ಆಗ್ರಾದ ಖೇರಗಢ್ ಪಟ್ಟಣದ ನಾಗ್ಲಾ ದುಲ್ಹಾ ಗ್ರಾಮದ ನಿವಾಸಿ. 1985ರಿಂದ 2022 ರವರೆಗೆ ಅವರು ಪ್ರತಿ ದೊಡ್ಡ ಮತ್ತು ಸಣ್ಣ ಚುನಾವಣೆಯಲ್ಲಿಯೂ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಆದರೆ ಯಾವ ಪಕ್ಷವೂ ಅವರಿಗೆ ಟಿಕೆಟ್ ನೀಡಿಲ್ಲ, ಪ್ರತಿ ಬಾರಿಯೂ ಸ್ವತಂತ್ರ ಅಭ್ಯರ್ಥಿಯಾಗಿಯೇ  ಸ್ಪರ್ಧಿಸುತ್ತಿದ್ದಾರೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುಕ್ರವಾರದಿಂದ ಆರಂಭವಾಗಿದೆ. ಆ ದಿನ 75 ವರ್ಷದ ಹಸ್ನೂರಾಮ್ ನಾಮಪತ್ರವನ್ನು ಪಡೆಯಲು ಆಗ್ರಾ ಜಿಲ್ಲಾಧಿಕಾರಿ ಕಚೇರಿ ತಲುಪಿದ್ದರು.

1985ರಲ್ಲಿ ಹಸ್ನೂರಾಮ್ ಅವರು ಪಕ್ಷವೊಂದರಿಂದ ಟಿಕೆಟ್ ಕೇಳಿದ್ದರಂತೆ. ನೀನು ಚುನಾವಣೆಗೆ ನಿಂತರೆ ಒಂದೂ ವೋಟು ಬೀಳುವುದಿಲ್ಲವೆಂದು ಅನೇಕರು ಅವರನ್ನು ಲೇವಡಿ ಮಾಡಿದ್ದರಂತೆ. ಈ ಅಪಹಾಸ್ಯವೇ ಚುನಾವಣೆಗಳಿಗೆ ಸ್ಪರ್ಧಿಸುವ ಉತ್ಸಾಹವನ್ನು ಹೆಚ್ಚಿಸಿತ್ತು. ಪ್ರತಿಯೊಂದು ಚುನಾವಣೆಗಳಲ್ಲಿಯೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಶುರು ಮಾಡಿದರಂತೆ. ಇದೇ ಉತ್ಸಾಹದಲ್ಲಿಯೇ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹಸ್ನೂರಾಮ್ ಎರಡು ಸ್ಥಾನಗಳಿಂದ ಕಣಕ್ಕಿಳಿದಿದ್ದಾರೆ.

ಬರೇಲಿಯ ಕಾಕಾ ಜೋಗಿಂದರ್ ಸಿಂಗ್ ಅವರ ಹೆಸರಿನಲ್ಲಿ ಅತಿ ಹೆಚ್ಚು ಚುನಾವಣೆಗಳಲ್ಲಿ ಸ್ಪರ್ಧಿಸಿದ ದಾಖಲೆ ಇದೆ. ಒಟ್ಟು 300 ದೊಡ್ಡ ಮತ್ತು ಸಣ್ಣ ಚುನಾವಣೆ ಗಳಲ್ಲಿ ಸ್ಪರ್ಧಿಸಿದ್ದಾರೆ. ವಾರ್ಡ್ ಕೌನ್ಸಿಲರ್ ನಿಂದ ಹಿಡಿದು ದೇಶದ ಅಧ್ಯಕ್ಷರ ಚುನಾವಣೆವರೆಗೂ ಇವರು ಸ್ಪರ್ಧಿಸಿದ್ದರು.