Thursday, 12th December 2024

ಈರೋಡ್ ಸಂಸದ ಎ.ಗಣೇಶಮೂರ್ತಿ ನಿಧನ

ಕೊಯಮತ್ತೂರು: ಇತ್ತೀಚೆಗೆ ಆತ್ಮಹತ್ಯೆಗೆ ಯತ್ನಿಸಿದ್ದ ಈರೋಡ್ ಸಂಸದ ಎ.ಗಣೇಶಮೂರ್ತಿ(77) ಗುರುವಾರ ಬೆಳಿಗ್ಗೆ ಕೊಯಮ ತ್ತೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಎಂಡಿಎಂಕೆ ಪಕ್ಷದ ಗಣೇಶಮೂರ್ತಿ ಅವರು ಮಾ.24ರಂದು ತಮ್ಮ ನಿವಾಸದಲ್ಲಿ ವಿಷಯುಕ್ತ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಈ ಸಂಬಂಧ ಈರೋಡ್ ಟೌನ್ ಪೊಲೀಸರು ಆತ್ಮಹತ್ಯೆ ಯತ್ನ ಪ್ರಕರಣ ದಾಖಲಿಸಿದ್ದರು.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಇನ್‌ಸ್ಟಿಟ್ಯೂಟ್ ಆಫ್ ರೋಡ್ ಟ್ರಾನ್ಸ್‌ಪೋರ್ಟ್ (ಐಆರ್‌ಟಿ) ವೈದ್ಯಕೀಯ ಕಾಲೇಜಿಗೆ ಸಾಗಿಸಲಾಗಿದೆ. ಬಳಿಕ ಕುಮಾರವಲಸು ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಗಣೇಶಮೂರ್ತಿ ಅವರು 2019ರಲ್ಲಿ ಡಿಎಂಕೆಯ ಸಂಸದರಾಗಿ ಲೋಕಸಭೆಗೆ ಆಯ್ಕೆಯಾಗಿದ್ದರು. 1998ರಲ್ಲಿ ಪಳನಿ ಹಾಗೂ 2009ರಲ್ಲಿ ಈರೋಡ್ ಲೋಕಸಭೆ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದರು.