ಗುಜರಾತ್: ಅಯೋಧ್ಯೆಯಲ್ಲಿ ರಾಮಮಂದಿರ ದೇವಾಲಯದ ಉದ್ಘಾಟನೆಯ ನಂತರ ಮುಂಬರುವ ತಿಂಗಳುಗಳಲ್ಲಿ ಈ ಸ್ಥಳವು ಲಕ್ಷಾಂತರ ಯಾತ್ರಾ ರ್ಥಿಗಳಿಗೆ ಆತಿಥ್ಯ ವಹಿಸುವ ನಿರೀಕ್ಷೆಯಿರುವುದರಿಂದ ನಗರದಲ್ಲಿ ವಿವಿಧ ಮೂಲಸೌಕರ್ಯ ಯೋಜನೆಗಳು ನಡೆಯುತ್ತಿವೆ.
ಮಂದಿರದ ಉದ್ಘಾಟನೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಭಕ್ತರು ನಾನಾ ರೀತಿಯಲ್ಲಿ ಸೇವೆಗಳನ್ನು ನೀಡಲು ಮುಂದಾಗಿದ್ದಾರೆ. ಗುಜರಾತ್ ನ ವಡೋದರಾದ ಭಕ್ತ ಅಯೋಧ್ಯಾ ರಾಮ ಮಂದಿರಕ್ಕೆ ಸುಮಾರು 108 ಅಡಿ ಉದ್ದದ ಅಗರಬತ್ತಿ ನೀಡಲು ಮುಂದಾಗಿದ್ದಾರೆ.
ವಡೋದರದ ತರ್ಸಾಲಿ ಪ್ರದೇಶದಲ್ಲಿ ನೆಲೆಸಿರುವ ವಿಹಾಭಾಯಿ ಭರ್ವಾಡ್ ಏಕಾಂಗಿಯಾಗಿ ಈ ಬೃಹತ್ ಗಾತ್ರದ ಅಗರಬತ್ತಿ ರಚಿಸುತ್ತಿದ್ದಾರೆ.
ಬೃಹತ್ ಗಾತ್ರದ ಅಗರಬತ್ತಿಯು 3,000 ಕೆಜಿ ಗಿರ್ ಹಸುವಿನ ಸೆಗಣಿ, 91 ಕೆಜಿ ಗಿರ್ ಹಸುವಿನ ತುಪ್ಪ, 280 ಕೆಜಿ ದೇವದಾರ್ ಮರದ ಪುಡಿ, 376 ಕೆಜಿ ಗುಗಲ್, 280 ಕೆಜಿ ತಾಲ್, 280 ಕೆಜಿ ಜಾವ್, 370 ಕೆಜಿ ಪುಡಿ ಮಾಡಿದ ಕೊಪ್ರಾ ಮರದ ಪುಡಿಯನ್ನು ಸೇರಿಸಿ 108 ಅಡಿ ಉದ್ದದ ಬೃಹತ್ ಗಾತ್ರದ ಊದುಬತ್ತಿಯನ್ನು ನಿರ್ಮಿಸಿದ್ದು ಇದರ ಒಟ್ಟು ತೂಕ 3,500 ಕೆಜಿ ಹೊಂದಿದೆ ಎಂದು ಹೇಳಲಾಗಿದೆ.
ರಾಮ ಮಂದಿರದ ಉದ್ಘಾಟನೆಗೂ ಮುನ್ನ ಊದುಬತ್ತಿಯನ್ನು ರಸ್ತೆ ಮಾರ್ಗದ ಮೂಲಕ ಅಯೋಧ್ಯೆಗೆ ಸಾಗಿಸಲಾಗುವುದು ಎಂದು ಹೇಳಿದ್ದಾರೆ.