ಬಿಹಾರದಲ್ಲಿ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿರುವ ಉಪಮುಖ್ಯಮಂತ್ರಿ ರೇಣು ದೇವಿ ಅವರ ನಿವಾಸದ ಮೇಲೆ ದಾಳಿ ನಡೆಸ ಲಾಗಿದೆ. ಪ್ರತಿಭಟನೆ, ಹಿಂಸಾಚಾರದಿಂದ ಸಮಾಜಕ್ಕೆ ನಷ್ಟ ಎಂಬುದನ್ನು ಪ್ರತಿಭಟನಾಕಾರರು ತಿಳಿದುಕೊಳ್ಳಬೇಕು ರೇಣು ದೇವಿ ತಿಳಿಸಿದ್ದಾರೆ.
ಬಿಜಾರದಲ್ಲಿ ಅಗ್ನಿಪಥ್ ವಿರುದ್ಧದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ರೈಲುಗಳಿಗೆ ಬೆಂಕಿ ಹಚ್ಚಲಾಗಿದ್ದು, ಬಸ್ ಗಳ ಕಿಟಕಿ ಗಾಜುಗಳನ್ನು ಪುಡಿಗೈಯಲಾಗಿದೆ. ಇಡೀ ರಾಜ್ಯಾದ್ಯಂತ ಯುವಕರು ರೈಲ್ವೆ ಹಳಿ ಮತ್ತು ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಬೇಗುಸ ರಾಯ್ ನಲ್ಲಿ ವಿದ್ಯಾರ್ಥಿಗಳು ರೈಲ್ವೆ ನಿಲ್ದಾಣದಲ್ಲಿ ದಾಂಧಲೆ ನಡೆಸಿದ್ದು, ಸಮಷ್ಠಿಪುರ್ ನಲ್ಲಿ ಎರಡು ರೈಲುಗಳಿಗೆ ಬೆಂಕಿ ಹಚ್ಚಲಾಗಿದೆ. ಲಾಖಿಸರಾಯ್ ಜಿಲ್ಲೆಯಲ್ಲಿ ಬಿಜೆಪಿ ಕಚೇರಿ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ.
ಉತ್ತರಪ್ರದೇಶದಲ್ಲಿ ಬಲ್ಲಿಯಾ ರೈಲ್ವೆ ನಿಲ್ದಾಣದೊಳಕ್ಕೆ ನುಗ್ಗಿದ ಉದ್ರಿಕ್ತ ಯುವಕರ ಗುಂಪು ರೈಲುಗಳಿಗೆ ಬೆಂಕಿ ಹಚ್ಚಿ, ರೈಲ್ವೆ ನಿಲ್ದಾಣದಲ್ಲಿರುವ ಆಸ್ತಿ ಪಾಸ್ತಿಯನ್ನು ಹಾನಿಗೊಳಿಸಿರುವುದಾಗಿ ವರದಿ ತಿಳಿಸಿದೆ.
ಬಿಹಾರ ಮತ್ತು ಉತ್ತರಪ್ರದೇಶದ ಹಲವು ಭಾಗಗಳಲ್ಲಿ ಕೇಂದ್ರದ ನೂತನ ಅಗ್ನಿಪಥ್ ಯೋಜನೆಯ ವಿರುದ್ಧ ಪ್ರತಿಭಟನೆ ತೀವ್ರ ಗೊಂಡಿದೆ. ಬಿಜೆಪಿ ಆಡಳಿತದ ಮಧ್ಯಪ್ರದೇಶ, ಹರ್ಯಾಣದಲ್ಲಿಯೂ ಪ್ರತಿಭಟನೆ ಮುಂದುವರಿದಿದೆ.