Friday, 13th December 2024

ಮೂರನೇ ಮದುವೆಯ ನಂತರ ಮೊದಲ ಪತಿಯೇ ಬೇಕೆಂದ ಪತ್ನಿ..!

ಅಹಮದಾಬಾದ್: ಮಹಿಳೆ ತನ್ನ ಮೂರನೇ ಮದುವೆಯ ನಂತರ ತನ್ನ ಮೊದಲ ಪತಿಯೇ ಬೇಕು ಎಂದು ಕೋರ್ಟ್​​ ಮೆಟ್ಟಿಲೇರಿದ್ದಾಳೆ. ಹೀಗೊಂದು ಪ್ರಸಂಗ ನಡೆದದ್ದು ಅಹಮದಾಬಾದ್‌ ನಲ್ಲಿ.

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮಹಿಳೆ ಪ್ರೀತಿಸಿದವನೊಂದಿಗೆ ಓಡಿ ಹೋಗಿ ಮೊದಲ ಮದುವೆಯಾಗಿದ್ದಳು. ಅಹಮದಾಬಾದ್ ಮುನ್ಸಿಪಲ್ ಕಾರ್ಪೊ ರೇಶನ್‌ನ ಶಹಪುರ್ ವಾರ್ಡ್‌ನಲ್ಲಿ ಅವರ ವಿವಾಹವನ್ನು ನೋಂದಾಯಿಸಲಾಗಿತ್ತು. ಆದರೆ ಮಹಿಳೆಯ ಮನೆಯವರಿಗೆ ತಿಳಿದಾಗ ಬಲವಂತವಾಗಿ ಮನೆಗೆ ಕರೆದುಕೊಂಡು ಹೋಗಿದ್ದಾರೆ.

ನಂತರ ಮಹಿಳೆಯ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದು, ಪತ್ನಿಯನ್ನು ಮರಳಿಸುವಂತೆ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ಮಹಿಳೆಯನ್ನು ನ್ಯಾಯಾ ಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ. ಪೊಲೀಸರು ಮಹಿಳೆಯನ್ನು ಹುಡುಕಿದರು ಮತ್ತು ಮನೆಯಿಂದ ವಶಪಡಿಸಿಕೊಂಡರು. ಬಳಿಕ ಮಹಿಳೆ ನ್ಯಾಯಾಲಯಕ್ಕೆ ಹಾಜರಾಗಿ ತನ್ನ ಮೊದಲ ಮದುವೆ ಖಾತ್ರಿಪಡಿಸಿಕೊಂಡಿದ್ದು, ಮೊದಲು ತನ್ನ ಪತಿಯನ್ನು ಗುರುತಿಸಿ ನಂತರ ಸತ್ಯವನ್ನು ಬಹಿರಂಗಪಡಿಸಿದ್ದು, ಇದನ್ನು ಕೇಳಿ ಎಲ್ಲರೂ ಅಚ್ಚರಿಗೊಂಡಿದ್ದಾರೆ.

ಮೊದಲ ಮದುವೆಯಾದ ನಂತರ ಕೋಪಗೊಂಡ ಮನೆಯವರು ಬಲವಂತವಾಗಿ ಕರೆದುಕೊಂಡು ಹೋಗಿ ಎರಡನೇ ಮದುವೆ ಮಾಡಿಸಿದ್ದಾರೆ ಎಂದು ಮಹಿಳೆ ಹೇಳಿದ್ದಾಳೆ. ಆದರೆ, ಎರಡನೇ ಪತಿಯೂ ಮಹಿಳೆಯನ್ನು ತೊರೆದಿದ್ದ. ನಂತರ ಮಹಿಳೆಯನ್ನು ಬನಸ್ಕಾಂತ ಜಿಲ್ಲೆಗೆ ಕರೆದೊಯ್ದು ಮೂರನೇ ಬಾರಿಗೆ ವಿವಾಹ ಮಾಡಿಸಲಾಗಿದೆ.

ಆದರೆ ತಾನು ಮೊದಲ ಪತಿಯೊಂದಿಗೆ ಇರಲು ಬಯಸಿರುವುದಾಗಿ ಮಹಿಳೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಮಹಿಳೆಯ ಕೋರಿಕೆಗೆ ಮಣಿದ ನ್ಯಾಯಾಲಯ, ಭದ್ರತೆ ಒದಗಿಸುವಂತೆ ಸರ್ಕಾರಿ ವಕೀಲರಿಗೆ ಆದೇಶ ನೀಡಿದ್ದು, ಆಕೆಯ ಮೊದಲ ಪತಿಯೊಂದಿಗೆ ಜೀವನ ನಡೆಸಲು ಅವಕಾಶ ನೀಡಿದೆ.