Thursday, 12th December 2024

‘ಹೈ ತಯಾರ್ ಹಮ್’ ರ್‍ಯಾಲಿ ಸಂಘಟನೆಗಾಗಿ 9 ಎಐಸಿಸಿ ಕಾರ್ಯದರ್ಶಿಗಳ ನೇಮಕ

ನವದೆಹಲಿ: ನಾಗ್ಪುರದಲ್ಲಿ ಡಿ.28ರಂದು ಆಯೋಜಿಸಲಾಗುವ ‘ಹೈ ತೈಯಾರ್ ಹಮ್’ ರಾಷ್ಟ್ರೀಯ ಮಟ್ಟದ ರ್‍ಯಾಲಿಗೆ ಸಜ್ಜುಗೊಳಿಸಲು ಮತ್ತು ಇತರ ವ್ಯವಸ್ಥೆಗಳನ್ನು ಸಂಘಟಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 9 ಎಐಸಿಸಿ ಕಾರ್ಯದರ್ಶಿಗಳನ್ನು ನೇಮಕ ಮಾಡಿದ್ದಾರೆ.

ಎಐಸಿಸಿ ಸದಸ್ಯರಾದ ಪಿ.ಸಿ. ವಿಷ್ಣುನಾಧ್, ಖಾಜಿ ನಿಜಾಮುದ್ದೀನ್, ಸಂಜಯ್ ಕಪೂರ್, ಧೀರಜ್ ಗುರ್ಜರ್, ಚಂದನ್ ಯಾದವ್, ಬಿ.ಎಂ. ಸಂದೀಪ್, ಚೇತನ್ ಚವ್ಹಾಣ್, ಪ್ರದೀಪ್ ನರ್ವಾಲ್ ಮತ್ತು ಅಭಿಷೇಕ್ ದತ್ ಅವರನ್ನು ನೇಮಿಸಲಾಗಿದೆ.

ವಿಪಕ್ಷಗಳ ಇಂಡಿಯಾ ಒಕ್ಕೂಟದಿಂದ ನವದೆಹಲಿಯಲ್ಲಿ ನಡೆದ ನಾಲ್ಕನೇ ಸಭೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಮತ್ತು ಸಂಸತ್ತಿನಿಂದ ಸಂಸದರನ್ನು ಅಮಾನತುಗೊಳಿಸುವ ನಿರ್ಣಯ ಅಂಗೀಕರಿಸಲಾಯಿತು. ಇತ್ತೀಚಿನ ಸಂಸತ್ತಿನ ಭದ್ರತಾ ಉಲ್ಲಂಘನೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರಿಸುವಂತೆ ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದವು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಡುವಿನ ರಾಜಕೀಯ ಉದ್ವಿಗ್ನತೆಯ ನಡುವೆ ಯೂ ಇಂಡಿಯಾ ಒಕ್ಕೂಟದ ಸಭೆ ನಡೆಯಿತು.

ಇವಿಎಂಗಳ ಕಾರ್ಯನಿರ್ವಹಣೆಯ ಸಮಗ್ರತೆಯ ಬಗ್ಗೆ ಹಲವು ಅನುಮಾನಗಳಿವೆ ಎಂದು ಪ್ರತಿಪಕ್ಷಗಳು ಪುನರುಚ್ಚರಿಸುತ್ತವೆ. ಈ ಬಗ್ಗೆ ಅನೇಕ ತಜ್ಞರು ಮತ್ತು ವೃತ್ತಿಪರರು ಸಹ ಧ್ವನಿ ಎತ್ತಿದ್ದಾರೆ. ಬ್ಯಾಲೆಟ್ ಪೇಪರ್ ವ್ಯವಸ್ಥೆಗೆ ಮರಳಲು ವ್ಯಾಪಕ ಬೇಡಿಕೆಯಿದೆ ಎಂದು ನಿರ್ಣಯವು ತಿಳಿಸುತ್ತದೆ.

ವಿವಿ ಪ್ಯಾಟ್ ಚೀಟಿ ಪೆಟ್ಟಿಗೆಯಲ್ಲಿ ಬೀಳುವ ಬದಲು ಅದನ್ನು ಮತದಾರರಿಗೆ ಹಸ್ತಾಂತರಿಸಬೇಕು. ಅವರು ತಮ್ಮ ಆಯ್ಕೆಯನ್ನು ಪರಿಶೀಲಿಸಿದ ನಂತರ ಅದನ್ನು ಪ್ರತ್ಯೇಕ ಮತ ಪೆಟ್ಟಿಗೆಯಲ್ಲಿ ಇರಿಸಬೇಕು. ವಿವಿಪ್ಯಾಟ್ ಸ್ಲಿಪ್‌ಗಳ 100 ಪ್ರತಿಶತ ಎಣಿಕೆ ಮಾಡಬೇಕು. ಇದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಜನರಲ್ಲಿ ಸಂಪೂರ್ಣ ವಿಶ್ವಾಸ ಮೂಡಿಸುತ್ತದೆ ಎಂದು ನಿರ್ಣಯ ಹೇಳಿದೆ.