ಜೈಪುರ: ವಿಸ್ತಾರ ಏರ್ಲೈನ್ನ ವಿಮಾನದ ಬೆನ್ನಿಗೇ ಏರ್ ಇಂಡಿಯಾ ಎಕ್ಸ್ಪ್ರೆಸ್ (Air India Express) ವಿಮಾನಕ್ಕೂ ಶುಕ್ರವಾರ (ಅಕ್ಟೋಬರ್ 18) ತಡರಾತ್ರಿ ಬಾಂಬ್ ಬೆದರಿಕೆ ಸಂದೇಶ ಬಂದಿದೆ (Bomb Threat). ದುಬೈಯಿಂದ ರಾಜಸ್ಥಾನದ ಜೈಪುರಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ನ IX-196 ವಿಮಾನಕ್ಕೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ರವಾನೆಯಾಗಿತ್ತು. ಈ ಹಿನ್ನೆಲೆಯಲ್ಲಿ 189 ಪ್ರಯಾಣಿಕರಿದ್ದ ವಿಮಾನವನ್ನು ಶನಿವಾರ ಮುಂಜಾನೆ 1.20ರ ಸುಮಾರಿಗೆ ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಇಳಿಸಲಾಯಿತು. ʼʼತಪಾಸಣೆ ಬಳಿಕೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಇದೊಂದು ಹುಸಿ ಬಾಂಬ್ ಬೆದರಿಕೆಯಾಗಿತ್ತುʼʼ ಎಂದು ಮೂಲಗಳು ತಿಳಿಸಿವೆ.
ಜೈಪುರ ವಿಮಾನ ನಿಲ್ದಾಣ ಪೊಲೀಸ್ ಎಸ್ಎಚ್ಒ ಸಂದೀಪ್ ಬಸೇರಾ ಸುದ್ದಿಸಂಸ್ಥೆ ಎಎನ್ಐ ಜತೆ ಮಾತನಾಡಿ, “ಭದ್ರತಾ ಪಡೆಗಳ ಕೂಲಂಕುಷ ಪರಿಶೀಲನೆಯ ನಂತರ, ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ” ಎಂದು ಹೇಳಿದ್ದಾರೆ.
Jaipur, Rajasthan | An Air India Express flight IX-196 flying from Dubai to Jaipur, with 189 passengers onboard, received a bomb threat via email. The plane landed at the Jaipur International Airport at 1:20 am. After a thorough check by the security forces, nothing suspicious…
— ANI (@ANI) October 19, 2024
ವಿಸ್ತಾರ ಏರ್ಲೈನ್ಗೂ ಬೆದರಿಕೆ
ದಿಲ್ಲಿಯಿಂದ ಲಂಡನ್ಗೆ ತೆರಳುತ್ತಿದ್ದ ವಿಸ್ತಾರ ವಿಮಾನಕ್ಕೂ ಶುಕ್ರವಾರ (ಅಕ್ಟೋಬರ್ 18) ತಡರಾತ್ರಿ ಬಾಂಬ್ ಬೆದರಿಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ವಿಮಾನವನ್ನು ಜರ್ಮನಿಯ ಫ್ರಾಂಕ್ಫರ್ಟ್ (Frankfurt airport) ಇಳಿಸಲಾಯಿತು. ʼʼಫ್ರಾಂಕ್ಫರ್ಟ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ ಮತ್ತು ತಪಾಸಣೆ ನಡೆಸಲಾಗಿದೆ. ಯಾವುದೇ ಸ್ಫೋಟಕ ಪತ್ತೆಯಾಗಿಲ್ಲʼʼ ಎಂದು ವಿಸ್ತಾರ ವಿಮಾನದ ಮೂಲಗಳು ತಿಳಿಸಿವೆ. ಕೂಲಂಕುಷ ಪರಿಶೀಲನೆ ಬಳಿಕ ವಿಮಾನ ಲಂಡನ್ಗೆ ತೆರಳಿತು.
ʼʼಶುಕ್ರವಾರ (ಅಕ್ಟೋಬರ್ 18) ರಾತ್ರಿ ದಿಲ್ಲಿಯಿಂದ ಲಂಡನ್ಗೆ ಹೊರಟಿದ್ದ ವಿಮಾನಕ್ಕೆ ಬೆದರಿಕೆ ಬಂದ ಹಿನ್ನಲೆಯಲ್ಲಿ ತಡರಾತ್ರಿ 12.30ರ ಸುಮಾರಿಗೆ ಫ್ರಾಂಕ್ಫರ್ಟ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು. ಪ್ರಯಾಣಿಕರನ್ನೆಲ್ಲ ಇಳಿಸಿ ತಪಾಸಣೆ ನಡೆಸಲಾಯಿತು. ಈ ವೇಳೆ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ವಿಮಾನ ಮತ್ತೆ ಲಂಡನ್ಗೆ ಪ್ರಯಾಣ ಬೆಳೆಸಿತುʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
40ಕ್ಕೂ ಹೆಚ್ಚು ವಿಮಾನಗಳಿಗೆ ಬೆದರಿಕೆ
ಕಳೆದ ಕೆಲವು ದಿನಗಳಲ್ಲಿ ಭಾರತದ ಸುಮಾರು 40 ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆಗಳು ಬಂದಿರುವುದು ಕಳವಳವನ್ನುಂಟು ಮಾಡಿದೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ”ವಿಮಾನಗಳಲ್ಲಿ ಬಾಂಬ್ಗಳ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಬೆದರಿಕೆಗಳನ್ನು ಪೋಸ್ಟ್ ಮಾಡುತ್ತಿದ್ದ ಹಲವಾರು ಖಾತೆಗಳನ್ನು ನಾವು ಗುರುತಿಸಿದ್ದೇವೆ ಮತ್ತು ಅಮಾನತುಗೊಳಿಸಿದ್ದೇವೆ. ಲಂಡನ್ ಮತ್ತು ಇತರ ದೇಶಗಳಿಂದ ಕೆಲವು ಬೆದರಿಕೆಗಳು ಬಂದಿವೆ” ಎಂದು ತಿಳಿಸಿದ್ದಾರೆ. ”ನಾವು ಎಲ್ಲ ಕರೆಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಮತ್ತು ಅದರ ಹಿಂದೆ ಇರುವ ವ್ಯಕ್ತಿಗಳನ್ನು ಗುರುತಿಸಲು ಬೆದರಿಕೆಯ ಬಗ್ಗೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.
ವಿಮಾನಯಾನ ಸಂಸ್ಥೆಗಳಿಗೆ ಹುಸಿ ಬಾಂಬ್ ಬೆದರಿಕೆಗಳ ಘಟನೆಗಳನ್ನು ತಡೆಗಟ್ಟಲು ಕಠಿಣ ನಿಯಮಗಳನ್ನು ಜಾರಿಗೆ ತರಲು ನಾಗರಿಕ ವಿಮಾನಯಾನ ಸಚಿವಾಲಯ ಯೋಜನೆ ರೂಪಿಸಿದೆ. ʼʼಕಠಿಣ ಕ್ರಮವನ್ನು ಖಚಿತಪಡಿಸಿಕೊಳ್ಳಲು ನಿಯಮಗಳನ್ನು ತಿದ್ದುಪಡಿ ಮಾಡಲು ಚಿಂತನೆ ನಡೆಸಲಾಗುತ್ತಿದೆʼʼ ಎಂದು ನಾಗರಿಕ ವಿಮಾನಯಾನ ಸಚಿವ ಕೆ.ರಾಮ್ ಮೋಹನ್ ನಾಯ್ಡು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Bomb Threat: ವಿಮಾನಗಳಿಗೆ ಬಾಂಬ್ ಬೆದರಿಕೆ ಪ್ರಯಾಣಿಕರು ಏನು ಮಾಡಬಹುದು?
ದಿಲ್ಲಿಯಿಂದ ಚಿಕಾಗೋಗೆ ಹೊರಟಿದ್ದ ಏರ್ ಇಂಡಿಯಾ ವಿಮಾನಕ್ಕೆ 4 ದಿನಗಳ ಹಿಂದೆಯಷ್ಟೇ ಬಾಂಬ್ ಬೆದರಿಕೆ ಬಂದಿತ್ತು. ಹೀಗಾಗಿ ಕೆನಡಾದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗಿತ್ತು.