Friday, 15th November 2024

Air India Flight: ಮುಂಬೈಯಿಂದ ನ್ಯೂಯಾರ್ಕ್‌ಗೆ ಹೊರಟಿದ್ದ ವಿಮಾನಕ್ಕೆ ಬಾಂಬ್‌ ಬೆದರಿಕೆ; ದಿಲ್ಲಿಯಲ್ಲಿ ಲ್ಯಾಂಡಿಂಗ್‌

Air India Flight

ಮುಂಬೈ: ಕೆಲವು ದಿನಗಳ ಬಿಡುವಿನ ಬಳಿಕ ಮತ್ತೆ ವಿಮಾನಗಳಿಗೆ ಬಾಂಬ್‌ ಬೆದರಿಕೆ ಕರೆ ಬರಲಾರಂಭಿಸಿದೆ. ಮುಂಬೈಯಿಂದ ನ್ಯೂಯಾರ್ಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ (Air India Flight)ಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಸೋಮವಾರ (ಅಕ್ಟೋಬರ್‌ 14) ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು.

ಮುಂಜಾನೆ ಸುಮಾರು 2 ಗಂಟೆಗೆ ಮುಂಬೈಯಿಂದ ಹೊರಟ ವಿಮಾನವನ್ನು ತಕ್ಷಣವೇ ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಡೈವರ್ಟ್‌ ಮಾಡಲಾಯಿತು. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗಿದೆ.

ʼʼವಿಮಾನವನ್ನು ಪ್ರಸ್ತುತ ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲ ಪ್ರಮಾಣಿತ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಶ್ರದ್ಧೆಯಿಂದ ಅನುಸರಿಸಲಾಗುತ್ತಿದೆʼʼ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಮೂಲಗಳ ಪ್ರಕಾರ ನ್ಯೂಯಾರ್ಕ್‌ಗೆ ಹೊರಟಿದ್ದ ಈ ವಿಮಾನದಲ್ಲಿ ಬಾಂಬ್‌ ಇರಿಸಿದ್ದಾಗಿ ಮುಂಬೈ ವಿಮಾನ ನಿಲ್ದಾಣಕ್ಕೆ ಎಕ್ಸ್ (ಹಿಂದಿನ ಟ್ವಿಟರ್)ನಲ್ಲಿ ಬೆದರಿಕೆಯ ಸಂದೇಶ ಬಂದಿದೆ. ಈ ಸಂದೇಶವನ್ನು ದಿಲ್ಲಿಯ ಭದ್ರತಾ ಸಂಸ್ಥೆಗಳಿಗೆ ತಿಳಿಸಿದ ಹಿನ್ನೆಲೆಯಲ್ಲಿ ವಿಮಾನವನ್ನು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲು ಸೂಚನೆ ನೀಡಲಾಯಿತು.

ʼʼಅಕ್ಟೋಬರ್ 14ರಂದು ಮುಂಬೈನಿಂದ ನ್ಯೂಯಾರ್ಕ್‌ಗೆ ತೆರಳವ ಎಐ 119 (AI119) ವಿಮಾನಕ್ಕೆ ಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ ಸರ್ಕಾರದ ಭದ್ರತಾ ನಿಯಂತ್ರಣ ಸಮಿತಿಯ ಸೂಚನೆಯ ಮೇರೆಗೆ ದಿಲ್ಲಿಯಲ್ಲಿ ಸುರಕ್ಷಿತವಾಗಿ ಇಳಿಸಲಾಗಿದೆʼʼ ಎಂದು ಏರ್ ಇಂಡಿಯಾ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಪ್ರಸ್ತುತ ವಿಮಾನದಿಂದ ಎಲ್ಲ ಪ್ರಯಾಣಿಕರು ಇಳಿಸಲಾಗಿದೆ. ಪ್ರಯಾಣಿಕರಿಗೆ ಯಾವುದೇ ರೀತಿಯ ಅನಾನುಕೂಲತೆ ಎದುರಾಗದಂತೆ ನಮ್ಮ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗಾಗಿ ಎಲ್ಲ ರೀತಿಯ ವ್ಯವಸ್ಥೆ ಕೈಗೊಂಡಿದ್ದಾರೆ. ಏರ್ ಇಂಡಿಯಾ ತನ್ನ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆ ಮತ್ತು ಭದ್ರತೆಗೆ ಬದ್ಧವಾಗಿದೆʼʼ ಎಂದು ಹೇಳಿದ್ದಾರೆ.

ತಿರುಚಿರಾಪಳ್ಳಿಯಿಂದ ಶಾರ್ಜಾಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವು ಶುಕ್ರವಾರ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷವನ್ನು ಎದುರಿಸಿದ ಘಟನೆ ಇನ್ನೂ ಹಸಿರಾಗಿರುವಾಗಲೇ ಈ ಬೆಳವನಿಗೆ ನಡೆದಿದೆ. ಸುಮಾರು 3 ಗಂಟೆಗಳ ಕಾಲ ಹಾರಾಡಿದ ಬಳಿಕ ಇಂಧನ ಖಾಲಿ ಮಾಡಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್‌ ಮಾಡಲಾಗಿತ್ತು. ಈ ಮೂಲಕ ಕ್ಯಾಪ್ಟನ್ ವಿಮಾನವನ್ನು ಅನುಭವ ಬಳಸಿ ಲ್ಯಾಂಡ್ ಮಾಡಿ 141 ಪ್ರಯಾಣಿಕರ ಜೀವ ಉಳಿಸಿದ್ದರು. 141 ಪ್ರಯಾಣಿಕರನ್ನು ಹೊತ್ತ ಬೋಯಿಂಗ್ 737 ವಿಮಾನವು ತಿರುಚ್ಚಿ ವಿಮಾನ ನಿಲ್ದಾಣದಿಂದ ಸಂಜೆ 5:45ಕ್ಕೆ ಹೊರಟು ರಾತ್ರಿ 8:15ಕ್ಕೆ ಲ್ಯಾಂಡ್ ಆಯಿತು. ವಿಮಾನಕ್ಕೆ ಬೆಲ್ಲಿ ಲ್ಯಾಂಡಿಂಗ್‌ಗೆ ಅನುಮತಿ ನೀಡಲಾಗಿತ್ತು. ಆದರೆ ವಿಮಾನವು ಸಾಮಾನ್ಯವಾಗಿ ಮತ್ತು ಸುರಕ್ಷಿತವಾಗಿ ಇಳಿಯಿತು.

ಈ ಸುದ್ದಿಯನ್ನೂ ಓದಿ: Air India Express : ಹಾರಾಟದ ನಡುವೆ ಸಮಸ್ಯೆ ಉಂಟಾಗಿ ಆತಂಕ ಸೃಷ್ಟಿಸಿದ್ದ ಏರ್‌ ಇಂಡಿಯಾ ವಿಮಾನ ಸೇಫ್‌ ಲ್ಯಾಂಡ್‌