ಬ್ಯಾಂಕಾಕ್: ಹೊಸದಿಲ್ಲಿಗೆ ಆಗಮಿಸಬೇಕಿದ್ದ ಏರ್ ಇಂಡಿಯಾ ವಿಮಾನ (Air India Flight)ದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಹಲವು ಪ್ರಯಾಣಿಕರು ಕಳೆದ 3 ದಿನಗಳಿಂದಲೂ ಥೈಲ್ಯಾಂಡ್‌ನ ಫುಕೆಟ್ (Phuket)ನಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಸದ್ಯ ಈ ಬಗ್ಗೆ ಹಲವು ಪ್ರಯಾಣಿಕರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ʼʼAI 377 ವಿಮಾನದಲ್ಲಿನ ತಾಂತ್ರಿಕ ದೋಷಗಳಿಂದಾಗಿ ಪದೇ ಪದೆ ವಿಳಂಬವಾದ ಕಾರಣ ನ. 16ರಿಂದ ಅಂದರೆ ಸುಮಾರು 80 ಗಂಟೆಗಳಿಂದ ಏರ್ ಇಂಡಿಯಾ ಪ್ರಯಾಣಿಕರು ಫುಕೆಟ್‌ನಲ್ಲಿ ಬಾಕಿಯಾಗಿದ್ದಾರೆʼʼ ಎಂದು ಮೂಲಗಳು ತಿಳಿಸಿವೆ. ನ. 16ರಂದು ಸಂಜೆ 5:50ಕ್ಕೆ ಫುಕೆಟ್‌ನಿಂದ ದಿಲ್ಲಿಗೆ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನವು ಆರಂಭಿಕ ವಿಳಂಬವನ್ನು ಎದುರಿಸಿತು. ನಂತರ ಸಂಪೂರ್ಣವಾಗಿ ರದ್ದುಗೊಂಡಿತು.
@IndiainThailand your excellency
— Anshul Tiwari (@anshult61693851) November 18, 2024
There are more than 100 passengers stuck in Phuket Thailand as a result of sheer incompetence of @airindia .
There are toddlers and people missing serious appointments.
Details-AI 377 scheduled departure on 16 Nov 24.Delayed then cancelled.
ಪ್ರಯಾಣಿಕರು ಹೇಳಿದ್ದೇನು?
“ಏರ್ ಇಂಡಿಯಾದ ನಿರ್ಲಕ್ಷ್ಯದಿಂದ ಥೈಲ್ಯಾಂಡ್‌ನ ಫುಕೆಟ್‌ನಲ್ಲಿ ಪ್ರಯಾಣಿಕರು ಸಿಲುಕಿದ್ದಾರೆ. ಈ ಪೈಕಿ ಅಂಬೆಗಾಲಿಡುವ ಮಕ್ಕಳಿಂದ ಹಿಡಿದು ವೃದ್ಧರೂ ಇದ್ದಾರೆ. ಆರಂಭಿಕ ವಿಳಂಬದ ನಂತರ ವಿಮಾನವನ್ನು ರದ್ದುಪಡಿಸಲಾಗಿದೆʼʼ ಎಂದು ಪ್ರಯಾಣಿಕರೊಬ್ಬರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಇದು ನಿಜವಾಗಿಯೂ ಭಯಾನಕ ಪರಿಸ್ಥಿತಿ. ಎರಡು ದಿನಗಳಿಂದ ಇಲ್ಲೇ ಬಾಕಿಯಾದ ಹಿನ್ನೆಲೆಯಲ್ಲಿ ರೈಲುಗಳು, ಕ್ಯಾಬ್‌ಗಳ ಸಂಪರ್ಕ ಕಡಿತಗೊಂಡಿದೆ. ದೋಷಪೂರಿತ ವಿಮಾನದಿಂದಾಗಿ ಪ್ರಯಾಣಿಕರು ವೈಯಕ್ತಿಕ ನಷ್ಟವನ್ನು ಏಕೆ ಭರಿಸಬೇಕು?” ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಏರ್ ಇಂಡಿಯಾ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದೂ ತಿಳಿಸಿದ್ದಾರೆ. ರಿಫಂಡ್ ಮತ್ತು ಬದಲಿ ವ್ಯವಸ್ಥೆ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಏರ್ ಇಂಡಿಯಾ ಪ್ರತಿಕ್ರಿಯೆ ಏನು?
ಪ್ರಯಾಣಿಕರ ದೂರಿಗೆ ಏರ್ ಇಂಡಿಯಾ ಪ್ರತಿಕ್ರಿಯೆ ನೀಡಿದ್ದು, ಅಡಚಣೆಗಾಗಿ ಕ್ಷಮೆ ಕೋರಿದೆ. ʼʼನಿಮ್ಮ ನೋವನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ ಮತ್ತು ಉಂಟಾದ ಅಡಚಣೆಗೆ ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇವೆ. ವಿವಿಧ ಅಂಶಗಳು ನಮ್ಮ ವಿಮಾನ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರಿದೆ. ಆದಾಗ್ಯೂ ನಿಮ್ಮ ಪ್ರತಿಕ್ರಿಯೆಯನ್ನು ಪರಿಶೀಲಿಸುತ್ತಿದ್ದೇವೆʼʼ ಎಂದು ತಿಳಿಸಿದೆ. ಪ್ರಯಾಣಿಕರಿಗೆ ವಸತಿ ಮತ್ತು ಊಟ ಸೇರಿದಂತೆ ಎಲ್ಲ ಸೌಲಭ್ಯ ಒದಗಿಸಲಾಗಿದೆ ಎಂದು ತಿಳಿಸಿದೆ. ಕೆಲವು ಪ್ರಯಾಣಿಕರನ್ನು ಈಗಾಗಲೇ ಕಳುಹಿಸಲಾಗಿದ್ದು, ಉಳಿದವರಿಗೆ ಮಂಗಳವಾರ (ನ. 19) ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದೆ.
ಘಟನೆ ವಿವರ
ವಿಮಾನವು ನ. 16ರ ಸಂಜೆ ದಿಲ್ಲಿಗೆ ಹೊರಡಬೇಕಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ 6 ಗಂಟೆವಿಳಂಬವಾಗಿದೆ ಎಂದು ಪ್ರತಿನಿಧಿಗಳು ಮಾಹಿತಿ ನೀಡಿದರು. ವಿಮಾನ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯುವಂತೆ ಮಾಡಿದ ನಂತರ, ವಿಮಾನ ಹತ್ತಲು ತಿಳಿಸಿದರು. ಆದರೆ 1 ಗಂಟೆಯ ನಂತರ ಮತ್ತೆ ಇಳಿಸಲಾಯಿತು. ಬಳಿಕ ವಿಮಾನ ರದ್ದಾಗಿರುವುದನ್ನು ಘೋಷಿಸಿದರು ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ಮರುದಿನ ವಿಮಾನವನ್ನು ಹಾರಾಟಕ್ಕೆ ಸಿದ್ಧಪಡಿಸಲಾಯಿತು. ವಿಮಾನವು ಟೇಕ್ ಆಫ್ ಆದ ಸುಮಾರು ಎರಡೂವರೆ ಗಂಟೆಗಳ ನಂತರ ಮತ್ತೆ ಫುಕೆಟ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು. ಅಂದಿನಿಂದ ಪ್ರಯಾಣಿಕರು ಫುಕೆಟ್‌ನಲ್ಲಿ ಸಿಲುಕಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Air India Express : ಹಾರಾಟದ ನಡುವೆ ಸಮಸ್ಯೆ ಉಂಟಾಗಿ ಆತಂಕ ಸೃಷ್ಟಿಸಿದ್ದ ಏರ್ ಇಂಡಿಯಾ ವಿಮಾನ ಸೇಫ್ ಲ್ಯಾಂಡ್