ನವದೆಹಲಿ: ಭಾರತೀಯ ವಾಯುಪಡೆಯ ಎಂಐ-17ವಿ5 ಹೆಲಿಕಾಪ್ಟರ್ ಪತನದ ಬಗ್ಗೆ ತನಿಖೆಯ ಹೊಣೆಯನ್ನು ಏರ್ ಮಾರ್ಷಲ್ ಮನ್ವಿಂದರ್ ಸಿಂಗ್ ತನಿಖಾ ತಂಡದ ನೇತೃತ್ವ ವಹಿಸಿಕೊಂಡಿದೆ.
ಗುರುವಾರ ಲೋಕಸಭೆಯಲ್ಲಿ ಹೆಲಿಕಾಪ್ಟರ್ ಪತನದ ಬಗ್ಗೆ ಹೇಳಿಕೆ ನೀಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಿ, ಏರ್ ಮಾರ್ಷಲ್ ಮನ್ವಿಂದರ್ ಸಿಂಗ್ ತನಿಖೆ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದರು.
ಏರ್ ಮಾರ್ಷಲ್ ಮನ್ವಿಂದರ್ ಸಿಂಗ್ ಭಾರತೀಯ ವಾಯುಪಡೆಯ ತರಬೇತಿ ಕಮಾಂಡ್‌ನ ಕಮಾಂಡಿಂಗ್ ಆಫೀಸರ್ ಆಗಿದ್ದಾರೆ. ಈಗಾಗಲೇ ಎಂಐ-17ವಿ5 ಹೆಲಿಕಾಪ್ಟರ್ ಅಪಘಾತ ಸ್ಥಳದಿಂದ ಬ್ಲಾಕ್ ಬಾಕ್ಸ್ ಅನ್ನು ತನಿಖಾ ತಂಡ ವಶಕ್ಕೆ ಪಡೆದಿದೆ.
ಭಾರತೀಯ ವಾಯುಪಡೆ ಮುಖ್ಯಸ್ಥರಾದ ಏರ್ ಚೀಫ್ ಮಾರ್ಷಲ್ ವಿ. ಆರ್. ಚೌಧರಿ ಹೆಲಿಕಾಪ್ಟರ್ ಪತನಗೊಂಡ ಸ್ಥಳಕ್ಕೆ ಗುರುವಾರ ಭೇಟಿ ನೀಡಿದರು. ತಮಿಳುನಾಡು ಡಿಜಿಪಿ ಸಿ. ಶೈಲೇಂದ್ರ ಬಾಬು ಸಹ ಘಟನಾ ಸ್ಥಳದಲ್ಲಿದ್ದಾರೆ.
ಬುಧವಾರ ಮಧ್ಯಾಹ್ನ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ವಾಯು ಪಡೆಯ ಹೆಲಿಕಾಪ್ಟರ್ ಪತನಗೊಂಡಿತ್ತು. ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ (63), ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಜನರು ಘಟನೆ ಯಲ್ಲಿ ಮೃತಪಟ್ಟರು.
ಸೂಲೂರಿನಲ್ಲಿರುವ ವಾಯುಪಡೆ ತರಬೇತಿ ಕೇಂದ್ರದಿಂದ ಹೆಲಿಕಾಪ್ಟರ್ ಟೇಕಾಫ್ ಆಗಿತ್ತು. 12.08ಕ್ಕೆ ಸಂಪೂರ್ಣ ಸಂಪರ್ಕ ಕಳೆದುಕೊಂಡಿತ್ತು. ಲ್ಯಾಂಡ್ ಆಗಲು 7 ನಿಮಿಷಗಳು ಮಾತ್ರ ಬಾಕಿ ಇತ್ತು ಎಂದು ಲೋಕಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ ನೀಡಿದ್ದಾರೆ.
ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಅಂತ್ಯ ಸಂಸ್ಕಾರವನ್ನು ಸಂಪೂರ್ಣ ಸೇನಾ ಗೌರವದೊಂದಿಗೆ ನಡೆಸಲಾಗುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ಗುರು ವಾರ ಸಂಜೆಯಿಂದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಶುಕ್ರವಾರ ಅಂತ್ಯಕ್ರಿಯೆ ನಡೆಯಲಿದೆ.