Friday, 22nd November 2024

Air pollution: ಲಾಹೋರ್ ವಿಶ್ವದಲ್ಲೇ ಅತ್ಯಂತ ಕಲುಷಿತ ನಗರ; ಭಾರತವನ್ನು ದೂಷಿಸಿದ ಪಾಕ್‌

air pollution

ಇಸ್ಲಮಾಬಾದ್‌: ಪಾಕಿಸ್ತಾನದ ಎರಡನೇ ಅತಿದೊಡ್ಡ ನಗರವಾದ ಲಾಹೋರ್(Lahore) ವಿಶ್ವದಲ್ಲೇ ಅತ್ಯಂತ ಕಲುಷಿತ ನಗರ(Air pollution) ಎಂಬ ಕುಖ್ಯಾತಿ ಪಡೆದಿದೆ. ವಾಯು ಗುಣಮಟ್ಟ ಸೂಚ್ಯಂಕ (AQI)1900 ದಾಖಲಾಗಿದ್ದು, ಇದು ಅತ್ಯಂತ ಅಪಾಯಕಾರಿ ಎನ್ನಲಾಗಿದೆ. ಇನ್ನು ಪ್ರಾಂತೀಯ ಸರ್ಕಾರ ಮತ್ತು ಸ್ವಿಸ್ ಗ್ರೂಪ್ IQAir ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಪಾಕಿಸ್ತಾನ-ಭಾರತದ ಗಡಿಯ ಬಳಿ ಶನಿವಾರದಂದು ಅತಿ ಹೆಚ್ಚು ಮಾಲಿನ್ಯವನ್ನು ದಾಖಲಿಸಿದ ನಂತರ ಲಾಹೋರ್ ಭಾನುವಾರ ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ ಎನ್ನಲಾಗಿದೆ.

ವಾಯು ಮಾಲಿನ್ಯಕ್ಕೆ ಅದರ ತುರ್ತು ಪ್ರತಿಕ್ರಿಯೆ ಯೋಜನೆಯ ಭಾಗವಾಗಿ, ಲಾಹೋರ್‌ನಲ್ಲಿ ವರ್ಕ್‌ ಫ್ರಂ ಹೋಮ್‌ ಆದೇಶಗಳನ್ನು ಹೊರಡಿಸಿದೆ ಮತ್ತು ವಿವಿಧ ನಗರಗಳಲ್ಲಿ ಪ್ರಾಥಮಿಕ ಶಾಲೆಗಳನ್ನು ಮುಚ್ಚುವುದಾಗಿ ಘೋಷಿಸಿದೆ. ದಟ್ಟವಾದ ಹೊಗೆಯು ನಗರದಲ್ಲಿ ಆವರಿಸಿರುವ ಹಿನ್ನೆಲೆ ಸರ್ಕಾರವು ಒಂದು ವಾರದವರೆಗೆ ಪ್ರಾಥಮಿಕ ಶಾಲೆಗಳನ್ನು ಮುಚ್ಚಿದೆ, ಮಕ್ಕಳು ಮಾಸ್ಕ್ ಧರಿಸುವಂತೆ ಸಲಹೆ ನೀಡಿದ್ದಾರೆ ಎಂದು ಪಂಜಾಬ್‌ನ ಹಿರಿಯ ಸಚಿವ ಮರಿಯುಮ್ ಔರಂಗಜೇಬ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ವಾಹನ ಮಾಲಿನ್ಯವನ್ನು ಕಡಿಮೆ ಮಾಡಲು, 50% ಕಚೇರಿ ನೌಕರರು ಮನೆಯಿಂದಲೇ ಕೆಲಸ ಮಾಡಲಿದ್ದಾರೆ. ಜನರು ಮನೆಯೊಳಗೆ ಇರಲು, ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿ, ಮತ್ತು ಪ್ರಯಾಣ ಮತ್ತು ಅಗತ್ಯವಿಲ್ಲದಿದ್ದರೆ ಮನೆಯಿಂದ ಹೊರಗೆ ಹೋಗುವುದನ್ನು ತಪ್ಪಿಸುವಂತೆ ಸರ್ಕಾರವು ಸಲಹೆಯನ್ನು ನೀಡಿದೆ. ಎಲ್ಲಾ ಆಸ್ಪತ್ರೆಗಳಿಗೆ ಸ್ಮಾಗ್ ಕೌಂಟರ್‌ಗಳನ್ನು ನೀಡಲಾಗಿದೆ ಮತ್ತು ತುರ್ತು ಪರಿಸ್ಥಿತಿಗಳಿಗೆ ಸಿದ್ಧರಾಗುವಂತೆ ಸೂಚನೆ ಕೊಡಲಾಗಿದೆ.

ಇನ್ನು ತ್ರಿಚಕ್ರ ವಾಹನಗಳ ಮೇಲೆ ಸರ್ಕಾರವು ನಿಷೇಧವನ್ನು ವಿಧಿಸಿದ್ದು, ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡಲು ಕೆಲವು ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಿದೆ. ಈ ನಿಯಮಗಳನ್ನು ಅನುಸರಿಸಲು ವಿಫಲವಾದ ಕಾರ್ಖಾನೆಗಳು ಮತ್ತು ನಿರ್ಮಾಣ ಸ್ಥಳಗಳನ್ನು ಮುಚ್ಚಬಹುದು ಎಂದು ಅವರು ಹೇಳಿದರು.

ಭಾರತವನ್ನು ದೂಷಿಸಿದ ಪಾಕ್‌

ಲಾಹೋರ್‌ನಲ್ಲಿ ತಲೆದೋರಿರುವ ಈ ಭೀಕರ ವಾಯುಮಾಲಿನ್ಯಕ್ಕೆ ಪಾಕಿಸ್ತಾನ ಭಾರತವನ್ನು ಹೊಣೆಯನ್ನಾಗಿಸಿದೆ. ಹಿರಿಯ ಪಂಜಾಬ್ ಸಚಿವ ಔರಂಗಜೇಬ್ ಅವರು ವಾಯು ಮಾಲಿನ್ಯದ ಪರಿಸ್ಥಿತಿಯನ್ನು “ಅನಿರೀಕ್ಷಿತ” ಎಂದು ವಿವರಿಸಿದರು ಮತ್ತು ಹೆಚ್ಚುತ್ತಿರುವ ಹಾನಿಕಾರಕ ಮಾಲಿನ್ಯ ಮಟ್ಟಗಳು ನೆರೆಯ ಭಾರತದಲ್ಲಿ ಹೆಚ್ಚಾಗಿರುವ ವಾಯು ಮಾಲಿನ್ಯ ಸಮಸ್ಯೆಯೇ ಕಾರಣವೆಂದು ಹೇಳಿದರು. “ಭಾರತದೊಂದಿಗೆ ಮಾತುಕತೆಯಿಲ್ಲದೆ ಇದನ್ನು ಪರಿಹರಿಸಲಾಗುವುದಿಲ್ಲ” ಎಂದು ಹೇಳಿದ ಅವರು, ಪ್ರಾಂತೀಯ ಸರ್ಕಾರವು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಮೂಲಕ ಭಾರತದ ಜೊತೆ ಮಾತುಕತೆಗಳನ್ನು ಪ್ರಾರಂಭಿಸಲಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Delhi Air Pollution: ದಿಲ್ಲಿಯಲ್ಲಿ ಹೆಚ್ಚಿದ ವಾಯು ಮಾಲಿನ್ಯ; ಯಮುನೆಯಲ್ಲಿ ವಿಷಕಾರಿ ಅಂಶ ಪತ್ತೆ!