ನವದೆಹಲಿ: ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 225 ಪ್ರಯಾಣಿಕರನ್ನು ಹೊತ್ತು ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವನ್ನು ರಷ್ಯಾದ ಕ್ರಾಸ್ನೋಯರ್ಸ್ಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಕಾಕ್ ಪಿಟ್ ಸಿಬ್ಬಂದಿ ತಾಂತ್ರಿಕ ದೋಷವನ್ನು ಪತ್ತೆ ಹಚ್ಚಿದ ಹಿನ್ನಲೆಯಲ್ಲಿ ಎಐ 183 (AI 183) ವಿಮಾನವನ್ನು ರಷ್ಯಾದ ಕ್ರಾಸ್ನೋಯರ್ಸ್ಕ್ ಅಂತಾರಾ ಷ್ಟ್ರೀಯ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು. ಈ ವಿಮಾನದಲ್ಲಿ 225 ಪ್ರಯಾಣಿಕರು ಮತ್ತು 19 ಸಿಬ್ಬಂದಿ ಸೇರಿ ಒಟ್ಟು 244 ಮಂದಿ ಇದ್ದರು. ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ ಬಳಿಕ ಅವರೆಲ್ಲರನ್ನೂ ಹೆಚ್ಚಿನ ಟರ್ಮಿನಲ್ ಕಟ್ಟಡಕ್ಕೆ ಕರೆದೊಯ್ಯಲಾಯಿತು ಎಂದು ಅಧಿಕೃತರು ಮಾಹಿತಿ ನೀಡಿದ್ದಾರೆ.
‘ಕ್ರಾಸ್ನೋಯರ್ಸ್ಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ತನ್ನದೇ ಆದ ಸಿಬ್ಬಂದಿಯನ್ನು ಹೊಂದಿಲ್ಲದ ಕಾರಣ, ಪ್ರಯಾಣಿಕರಿಗೆ ಅಗತ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ನಾವು ಬೇರೆ ವ್ಯವಸ್ಥೆ ಮಾಡುತ್ತಿದ್ದೇವೆ’ ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ. ‘ಏರ್ ಇಂಡಿಯಾ ಸರ್ಕಾರಿ ಸಂಸ್ಥೆಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ. ಪ್ರಯಾಣಿಕರನ್ನು ಸ್ಯಾನ್ ಫ್ರಾನ್ಸಿಸ್ಕೋಗೆ ತಲುಪಿಸಲು ಶೀಘ್ರ ಪರ್ಯಾಯ ವ್ಯವಸ್ಥೆ ಮಡುತ್ತೇವೆʼʼ ಎಂದು ಭರವಸೆ ನೀಡಿದೆ.