Saturday, 23rd November 2024

ನೀಡದ ಗಾಲಿ ಕುರ್ಚಿ, ವೃದ್ದನ ಸಾವು: ಏರ್ ಇಂಡಿಯಾಗೆ ₹ 30 ಲಕ್ಷ ದಂಡ

ವದೆಹಲಿ: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಾಲಿಕುರ್ಚಿ ನೀಡದ ಕಾರಣ 80 ವರ್ಷದ ಪ್ರಯಾಣಿಕರೊಬ್ಬರು ವಿಮಾನದಿಂದ ಟರ್ಮಿನಲ್‌ಗೆ ನಡೆದುಕೊಂಡು ಹೋಗುತ್ತಿದ್ದಾಗ ಸಾವಿಗೀಡಾದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ₹ 30 ಲಕ್ಷ ದಂಡ ವಿಧಿಸಿದೆ.

ಘಟನೆಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತ್ವರಿತ ಕ್ರಮ ಕೈಗೊಂಡಿದೆ. ಏರ್ ಇಂಡಿಯಾಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಪ್ರತಿಕ್ರಿಯೆ ಪರಿಶೀಲಿಸಿದ ನಂತರ, ಏರ್ ಇಂಡಿಯಾ ತಪ್ಪಿತಸ್ಥರೆಂದು ಕಂಡುಬಂದಿದ್ದು, 30 ಲಕ್ಷ ರೂ. ದಂಡ ವಿಧಿಸಿದೆ.

ಪ್ರಯಾಣಿಕನ ಹೆಂಡತಿಗೆ ಗಾಲಿಕುರ್ಚಿಯನ್ನು ಒದಗಿಸಲಾಗಿದೆ. ಇನ್ನೊಂದು ಕುರ್ಚಿಯನ್ನು ವ್ಯವಸ್ಥೆ ಮಾಡುವವರೆಗೆ ಕಾಯುವಂತೆ ಸಿಬ್ಬಂದಿ ಅವರಿಗೆ ಸೂಚಿಸಿದ್ದರು. ಆದರೆ, ಅವರು ತನ್ನ ಹೆಂಡತಿಯೊಂದಿಗೆ ಟರ್ಮಿನಲ್‌ಗೆ ತೆರಳಲು ನಿರ್ಧರಿಸಿದರು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ನ್ಯೂಯಾರ್ಕ್‌ನಿಂದ ಮುಂಬೈಗೆ ತೆರಳುತ್ತಿದ್ದ ನಮ್ಮ ಪ್ರಯಾಣಿಕರಲ್ಲಿ ಒಬ್ಬರು ಗಾಲಿಕುರ್ಚಿಯಲ್ಲಿದ್ದ ಅವರ ಪತ್ನಿಯೊಂದಿಗೆ ಇಮಿಗ್ರೇಷನ್ ಅನ್ನು ತೆರವುಗೊಳಿಸಲು ಮುಂದಾದಾಗ ಅನಾರೋಗ್ಯಕ್ಕೆ ತುತ್ತಾದರು. ಗಾಲಿಕುರ್ಚಿಗಳಿಗೆ ಭಾರಿ ಬೇಡಿಕೆಯಿರುವ ಕಾರಣ, ಮತ್ತೊಂದನ್ನು ಒದಗಿಸುವವರೆಗೆ ಕಾಯುವಂತೆ ನಾವು ಪ್ರಯಾಣಿಕರಿಗೆ ವಿನಂತಿಸಿದ್ದೇವೆ ಎಂದು ಏರ್ ಇಂಡಿಯಾ ಹೇಳಿದೆ.

ಘಟನೆಯನ್ನು ಡಿಜಿಸಿಎ ಪರಿಶೀಲಿಸಿದ ನಂತರ, ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು ಅಥವಾ ನಡೆಯಲು ಸಾಧ್ಯವಾಗದಂತ ವ್ಯಕ್ತಿಗಳಿಗೆ ಅನುಸರಿಸುವ ನಿರ್ದಿಷ್ಟ ಮಾನದಂಡಗಳನ್ನು ಏರ್ ಇಂಡಿಯಾ ಅನುಸರಿಸಿಲ್ಲ ಎಂಬುದು ತಿಳಿದುಬಂದಿದೆ.