ಲಖನೌ: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಣ್ಣ ರಾಜಕೀಯ ಪಕ್ಷಗಳ ಜತೆ ಮೈತ್ರಿಗೆ ಸಮಾಜವಾದಿ ಪಕ್ಷದ ಬಾಗಿಲು ಸದಾ ತೆರೆದಿದೆ ಎಂದು ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
ಎಸ್‌ಪಿ ವಿರುದ್ಧ ನಿರಂತರ ವಾಗ್ದಾಳಿ ನಡೆಸುವ ಬಿಎಸ್‌ಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮ ನಿಲುವು ಸ್ಪಷ್ಟಪಡಿಸ ಬೇಕು ಎಂದೂ ಆಗ್ರಹಿಸಿದ್ದಾರೆ. ಬಿಎಸ್‌ಪಿ ಮತ್ತು ಕಾಂಗ್ರೆಸ್‌ನ ಹೋರಾಟ ಬಿಜೆಪಿ ವಿರುದ್ಧವೇ ಅಥವಾ ಎಸ್‌ಪಿ ವಿರುದ್ಧವೇ ಎಂದು ಅಖಿಲೇಶ್ ಪ್ರಶ್ನಿಸಿದ್ದಾರೆ.
ಸಣ್ಣ ಪಕ್ಷಗಳು ನಮ್ಮ ಜತೆ ಈಗಾಗಲೇ ಮೈತ್ರಿ ಮಾಡಿಕೊಂಡಿವೆ. ಉಳಿದ ಪಕ್ಷಗಳಿಗೂ ಸದಾ ಸ್ವಾಗತವಿದೆ. ಇನ್ನೂ ಹೆಚ್ಚಿನ ಪಕ್ಷಗಳು ನಮ್ಮ ಜತೆ ಕೈಜೋಡಿಸ ಲಿವೆ ಎಂದು ತಿಳಿಸಿದ್ದಾರೆ.
ಪೆಗಾಸಸ್ ವಿಚಾರವಾಗಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅಖಿಲೇಶ್, ಎನ್‌ಡಿಎಗೆ ಲೋಕಸಭೆಯಲ್ಲಿ 350ರಷ್ಟು ಸ್ಥಾನಗಳಿವೆ. ಅನೇಕ ರಾಜ್ಯ ಗಳಲ್ಲಿ ಬಿಜೆಪಿ ಆಡಳಿತವಿದೆ. ಆದರೂ ಅವರು ಗೂಢಚರ್ಯೆ ಯಾಕೆ ನಡೆಸುತ್ತಿದ್ದಾರೆ ಮತ್ತು ಆ ಮೂಲಕ ಏನನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ? ಈ ರೀತಿ ಮಾಡುವ ಮೂಲಕ ಅವರು ವಿದೇಶಿ ಶಕ್ತಿಗಳಿಗೆ ನೆರವಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.