Friday, 22nd November 2024

Akshay Kumar: ಅಯೋಧ್ಯೆಯಲ್ಲಿನ ಕೋತಿಗಳ ಆಹಾರಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ ಅಕ್ಷಯ್‌ ಕುಮಾರ್‌

ಲಖನೌ: ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದಿರ (Ayodhya Ram Mandir) ಪರಿಸರದಲ್ಲಿನ ಕೋತಿಗಳಿಗೆ ಆಹಾರ ಒದಗಿಸಲು ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ (Akshay Kumar) 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಆ ಮೂಲಕ ಮೂಕ ಪ್ರಾಣಿಗಳ ಸಹಾಯಕ್ಕೆ ಧಾವಿಸಿದ್ದಾರೆ. ಕೋತಿಗಳನ್ನು ರಾಮನ ಭಂಟ ಹನುಮಂತನಿಗೆ ಹೋಲಿಸಲಾಗುತ್ತದೆ. ಹೀಗಾಗಿ ಕೋತಿಗಳಿಗೆ ಪೂಜನೀಯ ಸ್ಥಾನವಿದೆ. ಸದ್ಯ ಅಕ್ಷಯ್‌ ಕುಮಾರ್‌ ಕಾರ್ಯಕ್ಕೆ ರಾಮ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ʼʼದೀಪಾವಳಿ ಹಿನ್ನೆಲೆಯಲ್ಲಿ ಅಯೋಧ್ಯೆಯ ರಾಮ ಮಂದಿರ ಪರಿಸರದಲ್ಲಿನ ಕೋತಿಗಳಿಗೆ ಆಹಾರ ಒದಗಿಸಲು ಅಕ್ಷಯ್‌ ಕುಮಾರ್‌ 1 ಕೋಟಿ ರೂ. ಒದಗಿಸಿದ್ದಾರೆ. ಇದರ ಜತೆಗೆ ಆಹಾರ ಒದಗಿಸುವ ವ್ಯಾನ್‌ಗಳ ಮೇಲೆ ತಮ್ಮ ಪೋಷಕರು ಮತ್ತು ತಮ್ಮ ಮಾವ ರಾಜೇಶ್‌ ಖನ್ನಾ ಹೆಸರು ಬರೆಯಿಸಿದ್ದಾರೆʼʼ ಎಂದು ಮೂಲಗಳು ಮಾಹಿತಿ ನೀಡಿವೆ. ಜಗದ್ಗುರು ಸ್ವಾಮಿ ರಾಘವಾಚಾರ್ಯ ಜೀ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ಆಂಜನೇಯ ಸೇವಾ ಟ್ರಸ್ಟ್ ಕೋತಿಗಳಿಗೆ ಆಹಾರ ಉಣಬಡಿಸುವ ಕಾರ್ಯ ನಡೆಸುತ್ತಿದೆ.

ಆಂಜನೇಯ ಸೇವಾ ಟ್ರಸ್ಟ್ ಸ್ಥಾಪಕ ಟ್ರಸ್ಟಿ ಪ್ರಿಯಾ ಗುಪ್ತ ಮಾಹಿತಿ ನೀಡಿ ಜನರಿಗೆ ಅನಾನುಕೂಲವಾಗದಂತೆ ಈ ಮಹತ್ಕಾರ್ಯ ನಡೆಯಲಿದೆ ಎಂದು ತಿಳಿಸಿದ್ದಾರೆ. “ಅಕ್ಷಯ್ ಕುಮಾರ್ ಅವರು ಹಿಂದೆಯೂ ಹಲವು ಮಾನವೀಯ ಕಾರ್ಯಗಳಿಗೆ ನೆರವು ನೀಡಿದ್ದಾರೆ. ಅವರು ಈ ಸೇವೆಯನ್ನು ತಮ್ಮ ಹೆತ್ತವರಾದ ಹರಿ ಓಂ, ಅರುಣಾ ಭಾಟಿಯಾ ಮತ್ತು ಮಾವ ರಾಜೇಶ್ ಖನ್ನಾ ಅವರ ಹೆಸರಿನಲ್ಲಿ ಆರಂಭಿಸಿದ್ದಾರೆ. ಅಕ್ಷಯ್ ಕೇವಲ ಉದಾರ ದಾನಿ ಮಾತ್ರವಲ್ಲ, ಸಾಮಾಜಿಕ ಪ್ರಜ್ಞೆಯುಳ್ಳ ನಾಗರಿಕ ಎನ್ನುವುದನ್ನು ಈ ಮೂಲಕ ಸಾಬೀತು ಪಡಿಸಿದ್ದಾರೆ. ಅವರು ಹಿಂದೆಯೂ ಅಯೋಧ್ಯೆಯ ನಾಗರಿಕರು ಮತ್ತು ನಗರದ ಬಗ್ಗೆ ಕಾಳಜಿ ವಹಿಸಿದ್ದರು. ನಾವು ಕೋತಿಗಳಿಗೆ ಆಹಾರವನ್ನು ನೀಡುವಾಗ ಯಾವುದೇ ನಾಗರಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಕೋತಿಗಳಿಗೆ ಆಹಾರ ನೀಡುವಾಗ ಅಯೋಧ್ಯೆಯ ಬೀದಿಗಳಲ್ಲಿ ಯಾವುದೇ ರೀತಿಯ ಕಸ ಹಾಕುವುದಿಲ್ಲ, ಮಾಲಿನ್ಯ ಮಾಡುವುದಿಲ್ಲ. ಸ್ವಚ್ಛತೆ ಕಾಪಾಡುತ್ತೇವೆʼʼ ಎಂದು ಭರವಸೆ ನೀಡಿದ್ದಾರೆ.

ದೀಪಾವಳಿ ಕೊಡುಗೆ

ಕೋತಿಗಳಿಗೆ ಅಕ್ಷಯ್‌ ಕುಮಾರ್‌ ಭರ್ಜರಿಯಾಗಿಯೇ ದೀಪಾವಳಿ ಉಡುಗೊರೆ ನೀಡಿದ್ದಾರೆ. ಇದರ ಭಾಗವಾಗಿ ಅಯೋಧ್ಯೆಯ ಹೊರವಲಯದ ಸುರಕ್ಷಿತ ಸ್ಥಳಗಳಲ್ಲಿ ಪ್ರತಿದಿನ 1,200ಕ್ಕೂ ಹೆಚ್ಚು ಕೋತಿಗಳಿಗೆ ಆಹಾರವನ್ನು ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಕೋತಿಗಳಿಗೆ ಆರೋಗ್ಯಕರ ಮತ್ತು ಪೌಷ್ಟಿಕಾಂಶಯುಕ್ತ ಆಹಾರ ನೀಡುವ ಗುರಿ ಹೊಂದಲಾಗಿದೆ.

ಅಕ್ಷಯ್‌ ಕುಮಾರ್‌ ಹೇಳಿದ್ದೇನು?

“ರಾಮ ಮಂದಿರದಂತಹ ಪವಿತ್ರ ಸ್ಥಳದಲ್ಲಿ ಕೋತಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೇಳಿದಾಗ ನನ್ನ ಕೈಲಾದಷ್ಟು ಕೊಡುಗೆ ನೀಡಬೇಕು ಎನಿಸಿತು. ಆಹಾರ ಕೊಂಡೊಯ್ಯುವ ವ್ಯಾನ್ ಮೇಲೆ ನನ್ನ ಪೋಷಕರು ಮತ್ತು ಮಾವನ ಹೆಸರನ್ನು ಬರೆಸುವುದು ಭಾವನಾತ್ಮಕ ನಿರ್ಧಾರವಾಗಿತ್ತು. ಇದರಿಂದ ಅಲ್ಲಿ ಎಲ್ಲೋ ಇರುವ ಅವರು ನನ್ನ ಬಗ್ಗೆ ಹೆಮ್ಮೆ ಪಡುತ್ತಾರೆ ಎಂದು ಭಾವಿಸುತ್ತೇನೆʼʼ ಎಂಬುದಾಗಿ ಅಕ್ಷಯ್‌ ಕುಮಾರ್‌ ಹಿಂದೂಸ್ತಾನ್‌ ಟೈಮ್ಸ್‌ಗೆ ತಿಳಿಸಿದ್ದಾರೆ.

ಅಕ್ಷಯ್‌ ಕುಮಾರ್ ಸಹಾಯಹಸ್ತ ಚಾಚುತ್ತಿರುವುದು ಇದು ಮೊದಲ ಸಲವೇನಲ್ಲ. ಈ ವರ್ಷದ ಆರಂಭದಲ್ಲಿ ಅವರು ಮುಂಬೈಯ ಹಾಜಿ ಅಲಿ ದರ್ಗಾದ ನವೀಕರಣಕ್ಕಾಗಿ 1.21 ಕೋಟಿ ರೂ.ಗಳ ದೇಣಿಗೆ ನೀಡಿದ್ದರು. ಕೋವಿಡ್ ಸಾಂಕ್ರಾಮಿಕ ರೋಗ ಉತ್ತುಂಗದಲ್ಲಿದ್ದಾಗ ಅವರು ಪಿಎಂ ಕೇರ್‌ ನಿಧಿಗೆ 25 ಕೋಟಿ ರೂ.ಗಳ ದೇಣಿಗೆ ನೀಡುವುದಾಗಿ ಭರವಸೆ ನೀಡಿದ್ದರು.

ಈ ಸುದ್ದಿಯನ್ನೂ ಓದಿ: Akshay Kumar: ಮತ್ತೊಂದು ಬಯೋಪಿಕ್‌ನಲ್ಲಿ ಅಕ್ಷಯ್‌ ಕುಮಾರ್‌; ಅನನ್ಯ ಪಾಂಡೆ, ಮಾಧವನ್‌ ಸಾಥ್‌