Tuesday, 19th November 2024

Alisha Abdullah: ಕಿರುಕುಳ ನೀಡಿದ ವ್ಯಕ್ತಿಯ ಹೆಡೆಮುರಿ ಕಟ್ಟಿ ಪೊಲೀಸ್‌ ಠಾಣೆಗೆ ಎಳೆದೊಯ್ದ ಬಿಜೆಪಿ ನಾಯಕಿ; ವಿಡಿಯೊ ವೈರಲ್‌

Alisha Abdullah

ಚೆನ್ನೈ: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚಾಗುತ್ತಿದೆ. ಜನ ಸಾಮಾನ್ಯರು ಬಿಡಿ ಅಧಿಕಾರಿಗಳು, ರಾಜಕೀಯ ನಾಯಕರು, ಸೆಲೆಬ್ರಿಟಿಗಳಿಗೂ ಕಿಡಿಗೇಡಿಗಳ ಕಾಟ ತಪ್ಪಿಲ್ಲ. ಇದೇ ರೀತಿಯ ಕೆಟ್ಟ ಅನುಭವ ತಮಿಳುನಾಡಿನ ಬಿಜೆಪಿ ನಾಯಕಿ ಆಲಿಶಾ ಅಬ್ದುಲ್ಲಾ (Alisha Abdullah) ಅವರಿಗೆ ಎದುರಾಗಿದ್ದು, ದೂರು ದಾಖಲಿಸಿದ್ದಾರೆ. ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದ ಫಿರೋಜ್‌ ಎಂಬಾತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ (Viral Video).

ತಮಿಳುನಾಡು ಬಿಜೆಪಿಯ ಕ್ರೀಡಾ ಮತ್ತು ಕೌಶಲ್ಯ ಅಭಿವೃದ್ಧಿ ಕೋಶದ ಕಾರ್ಯದರ್ಶಿ ಆಲಿಶಾ ಅಬ್ದುಲ್ಲಾ ತಮಗಾದ ಅನುಭವವನ್ನು ವಿವರಿಸಿ ಎಕ್ಸ್‌ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ. ಫಿರೋಜ್‌ ತನಗೆ ಅನೇಕ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ. ಕರೆ ಮಾಡಿ ಅವನೊಂದಿಗೆ ಮಲಗಲು, ಬಾಡಿ ಮಸಾಜ್‌ ಮಾಡಲು ಕೇಳಿದ್ದಾನೆ ಎಂದು ಆಲಿಶಾ ತಿಳಿಸಿದ್ದಾರೆ. ಅಲ್ಲದೆ ಕ್ರಮ ಕೈಗೊಳ್ಳಲು ಮೀನ ಮೇಷ ಎಣಿಸಿದ ಪೊಲೀಸರ ವಿರುದ್ಧವೂ ಕಿಡಿ ಕಾರಿದ್ದಾರೆ.

ಘಟನೆ ವಿವರ

ಫಿರೋಜ್‌ ತನ್ನ ಫೋನ್ ನಂಬರ್‌ ಪಡೆದುಕೊಂಡು ಅನುಚಿತ ಕರೆಗಳನ್ನು ಮಾಡುವ ಮೂಲಕ ಕಿರುಕುಳ ನೀಡಲು ಆರಂಭಿಸಿದ್ದ ಎಂದು ಆಲಿಶಾ ವಿವರಿಸಿದ್ದಾರೆ. “ಮೊದಲಿಗೆ ನಾನು ಆತನ ಕರೆ, ಸಂದೇಶಗಳನ್ನು ಕಡೆಗಣಿಸಿದೆ. ಆದರೆ ಸೋಮವಾರ (ನ. 18) ಬೆಳಗ್ಗೆ ನಿರಂತರವಾಗಿ ಕರೆ ಮಾಡಲು ಪ್ರಾರಂಭಿಸಿದ. ಈ ಹಿನ್ನೆಲೆಯಲ್ಲಿ ನನ್ನ ಕಚೇರಿಯ ಸಿಬ್ಬಂದಿಯೊಬ್ಬರು ಕರೆ ಸ್ವೀಕರಿಸಿದಾಗ ನಾನು ಮಸಾಜ್ ಮಾಡುವಂತೆ ಕೋರಿದ್ದ” ಎಂದು ಆಲಿಶಾ ತಿಳಿಸಿದ್ದಾರೆ.

ದೂರು ದಾಖಲಿಸಲು ಅಲಿಶಾ ಪೊಲೀಸರನ್ನು ಸಂಪರ್ಕಿಸಿದಾಗ ಅಧಿಕಾರಿಗಳು ತಕ್ಷಣ ಕ್ರಮ ತೆಗೆದುಕೊಳ್ಳಲು ನಿರಾಕರಿಸಿದ್ದರು ಎಂದು ಅವರು ಆರೋಪಿಸಿದ್ದಾರೆ. “ನನ್ನ ತಂದೆ ಮತ್ತು ಇತರರು ಆರೋಪಿಯನ್ನು ಬಂಧಿಸಿದ್ದರೂ ಕೇಲಂಬಕ್ಕಂ ಪೊಲೀಸ್ ಠಾಣೆಯಿಂದ ನೀಲಂಕರೈ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು. ಅಲ್ಲಿ ನಾವು ದೂರು ನೀಡಲು ಹಲವು ಗಂಟೆಗಳ ಕಾಲ ಕಾಯಬೇಕಾಯಿತು” ಎಂದು ಅವರು ಮಾಹಿತಿ ನೀಡಿದ್ದಾರೆ.

ಡ್ರಗ್ಸ್ ಚಟ ಹೊಂದಿದ್ದ ಫಿರೋಜ್‌

ಕಿರುಕುಳ ನೀಡಿದ ಫಿರೋಝ್‌ ಮಾದಕ ದ್ರವ್ಯಗಳ ಚಟ ಹೊಂದಿದ್ದ ಎಂದು ಆಲಿಶಾ ತಿಳಿಸಿದ್ದಾರೆ. ತಾವು ಶೇರ್‌ ಮಾಡಿಕೊಂಡಿರುವ ವಿಡಿಯೊದಲ್ಲಿ ಆಲಿಶಾ, ಆ ವ್ಯಕ್ತಿಯನ್ನು ಬಂಧಿಸಿ ತನ್ನ ಕಾರಿನಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ಯುವುದನ್ನು ತೋರಿಸಿದ್ದಾರೆ. “ಇದು ತುಂಬಾ ವಿಷಮ ಪರಿಸ್ಥಿತಿ. ಯಾವುದೇ ರಕ್ಷಣೆಯಿಲ್ಲದೆ ಪ್ರತಿದಿನ ಎಷ್ಟು ಮಹಿಳೆಯರು ಇಂತಹ ಪರಿಸ್ಥಿತಿ ಎದುರಿಸುತ್ತಾರೆಂದು ಊಹಿಸಿ. ಡ್ರಗ್ಸ್ ಹಾವಳಿಯಿಂದ ತಮಿಳುನಾಡಿನ ಸ್ಥಿತಿ ಹದಗೆಟ್ಟಿದೆʼʼ ಎಂದು ಅವರು ದೂರಿದ್ದಾರೆ. ಫಿರೋಜ್‌ನನ್ನು ಪೊಲೀಸರು ವಸಕ್ಕೆ ಪಡೆದಿದ್ದು, ವಿಚಾರಣೆ ನಡೆಯುತ್ತಿದೆ.

ಸದ್ಯ ಆಲಿಶಾ ಮಾಡಿರುವ ಪೋಸ್ಟ್‌ ವೈರಲ್‌ ಆಗಿದೆ. ಹಲವರು ಪ್ರತಿಕ್ರಿಯಿಸಿ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಇನ್ನು ಕೆಲವರು ಪರಿಸ್ಥಿತಿಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮಹಿಳೆಯರಿಗೆ ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ಗ್ರಾಮಸ್ಥರೆದುರೇ ಮಹಿಳಾ ಪೊಲೀಸ್ ಅಧಿಕಾರಿಗೆ ಯುವಕನಿಂದ ಕಪಾಳಮೋಕ್ಷ-ವಿಡಿಯೊ ಇದೆ