Friday, 22nd November 2024

ಗೋ ಹತ್ಯೆ ಮಾಡಿದವನಿಗೆ ಅಲಹಾಬಾದ್ ಹೈಕೋರ್ಟ್ ವಿಶೇಷ ಶಿಕ್ಷೆ!

ಅಲಹಾಬಾದ್: ಗೋ ಹತ್ಯೆ ನಿಷೇಧ ಕಾನೂನು ಬಲವಾಗಿದ್ದರೂ ಗೋ ಹತ್ಯೆ ನಡೆಯುತ್ತಲೇ ಇದೆ.
ಇದೀಗ ಗೋವುಗಳನ್ನು ಹತ್ಯೆ ಮಾಡಿದವನಿಗೆ ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ವಿಶೇಷ ಶಿಕ್ಷೆಯೊಂದನ್ನು ನೀಡಿದೆ. ಒಂದು ತಿಂಗಳುಗಳ ಕಾಲ ಗೋವುಗಳ ಸೇವೆ ಮಾಡಬೇಕು ಮತ್ತು 1 ಲಕ್ಷ ರೂಪಾಯಿ ದಂಡ ಕಟ್ಟಬೇಕು ಎಂದು ಆದೇಶಿಸಿದೆ.

ಆಲಿಯಾಸ್ ಕಲಿಯಾ ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಶೇಖರ್ ಕುಮಾರ್ ಯಾದವ್ ಈ ಆದೇಶ ಪ್ರಕಟಿಸಿದ್ದಾರೆ.

ನ್ಯಾಯಮೂರ್ತಿ ಶೇಖರಕುಮಾರ ಯಾದವ್ ಅವರ ಪೀಠವು ಹಿಂದಿಯಲ್ಲಿ ಬರೆದ ಜಾಮೀನು ಆದೇಶದಲ್ಲಿ ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಮೂಲಭೂತ ಹಕ್ಕುಗಳು ಕೇವಲ ಗೋಮಾಂಸ ತಿನ್ನುವವರಿಗೆ ಮಾತ್ರ ವಿಶೇಷವಲ್ಲ, ಬದಲಿಗೆ, ಗೋವನ್ನು ಪೂಜಿಸುವ ಮತ್ತು ಗೋವಿನ ಮೇಲೆ ಆರ್ಥಿಕವಾಗಿ ಅವಲಂಬಿತರಾದವ ರಿಗೂ ಅರ್ಥಪೂರ್ಣ ಜೀವನ ನಡೆಸಲು ಮೂಲಭೂತ ಹಕ್ಕುಗಳಿವೆ ಎಂದು ನ್ಯಾಯಪೀಠ ಗಮನಿಸಿದೆ. ಗೋ ಶಾಲೆಯಲ್ಲಿ ಕೆಲಸ ಮಾಡಿದ ಮತ್ತು ಕಟ್ಟಿರುವ ಹಣದ ಬಗ್ಗೆ ದಾಖಲೆ ಕೋರ್ಟ್‍ಗೆ ಸಲ್ಲಿಸುವಂತೆ ಆದೇಶಿಸಿದೆ.

ಬರೈಲಿ ಜಿಲ್ಲೆಯ ಬೊಜಿಪುರ ಪೊಲೀಸ್ ಠಾಣೆಯಲ್ಲಿ ಸಲೀಂ ವಿರುದ್ಧ ಕಳವು ಮತ್ತು ಗೋ ಹತ್ಯೆ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿತ್ತು. ಜಾಮೀನು ಕೋರಿ ಅರ್ಜಿ ದಾರನ ಪರ ವಕೀಲರು ವಾದಿಸಿದರು. ಸಲೀಂ ಜಾಮೀನಿನ ಮೇಲೆ ಬಿಡುಗಡೆಯಾದರೆ ಬರೈಲಿ ಗೋ ಶಾಲೆಗೆ 1 ಲಕ್ಷ ರೂ. ಜಮೆ ಮಾಡಲಾಗುವುದು ಹಾಗೂ ಒಂದು ತಿಂಗಳ ಕಾಲ ಗೋವುಗಳ ಸೇವೆ ಮಾಡುವುದಾಗಿ ಹೇಳಿದರು.

ಕೆಲ ದಿನಗಳ ಹಿಂದಷ್ಚೇ ಕಾನ್ಫುರದ ಗೋಶಾಲೆಯೊಂದರಲ್ಲಿ ಗೋಮಾಂಸ ಪತ್ತೆಯಾಗಿತ್ತು. ಗೋಶಾಲೆಯಲ್ಲಿ ಗೋಮಾಂಸ ಪತ್ತೆಯಾಗಿರುವ ಬಗ್ಗೆ ಮಾಹಿತಿ ಪಡೆದ ಬಿಥೂರ್ ಪೊಲೀಸರು ತನಿಖೆ ನಡೆಸಿದ್ದರು. ಈ ವೇಳೆ ಮಾಂಸವನ್ನು ಕೊಠಡಿಯೊಳಗೆ ಗೋಣಿಚೀಲದಲ್ಲಿ ಇರಿಸಲಾಗಿದ್ದು, ಗೋಶಾಲೆಯ ಹೊರಗಿನ ಚರಂಡಿಯಲ್ಲಿ ಹಸುವಿನ ತಲೆ ಪತ್ತೆಯಾಗಿತ್ತು.