ಅಮರಾವತಿ: ರಸ್ತೆ ಕಾಮಗಾರಿಗೆ ಎಂದು ಮೆಲ್ಘಾಟ್‌ಗೆ ತೆರಳಿದ್ದ ಬುಡಕಟ್ಟು ಕಾರ್ಮಿಕರ ಮೇಲೆ ಟ್ರಕ್ ಹರಿದಿದ್ದು, ಹಲವಾರು ಸಾವು ನೋವುಗಳು ಸಂಭವಿಸಿವೆ.
ಬುಲ್ಧಾನ ತಾಲೂಕಿನ ಮಲ್ಕಾಪುರದಿಂದ ನಂದೂರ ರಸ್ತೆಯ ರಾಷ್ಟ್ರೀಯ ಹೆದ್ದಾರಿ ನಂ.6ರಲ್ಲಿ ಅಪಘಾತ ಸಂಭವಿಸಿದೆ. ರಸ್ತೆ ಕಾಮಗಾರಿ ನಿಮಿತ್ತ ನಂದೂರಕ್ಕೆ ತೆರಳಿ ರಸ್ತೆ ಬದಿ ನಿರ್ಮಿಸಿದ್ದ ಗುಡಿಸಲಿನಲ್ಲಿ ಮೊರಗಡ ತಾಲೂಕು ಚಿಕಲದಾರದ 10 ಕೂಲಿ ಕಾರ್ಮಿಕರು ಮಲಗಿದ್ದರು. ಬೆಳಗ್ಗೆ ವೇಗವಾಗಿ ಬಂದ ಲಾರಿ ಗುಡಿಸಲಿಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಗುಡಿಸಲಿನಲ್ಲಿ ಮಲಗಿದ್ದ ಪ್ರಕಾಶ್ ಬಾಬು ಜಂಭೇಕರ್ (26 ವರ್ಷ), ಪಂಕಜ್ ತುಳಶಿರಾಮ್ ಜಂಭೇಕರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಿಕಿತ್ಸೆ ವೇಳೆ ಅಭಿಷೇಕ್ ರಮೇಶ್ ಜಂಭೇಕರ್ (18) ಮೃತಪಟ್ಟಿದ್ದು, ಇತರ ಕಾರ್ಮಿಕರು ಗಾಯಗೊಂಡಿದ್ದಾರೆ.
ದೀಪಕ್ ಶೋಗಿ ಬೆಲ್ಸಾರೆ (25 ವರ್ಷ) ಮತ್ತು ರಾಜ ದಾದು ಜಂಭೇಕರ್ (35 ವರ್ಷ) ಮಲ್ಕಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದ ಬಗ್ಗೆ ಮಾಹಿತಿ ನೀಡಿದ ಬುಲ್ಧಾನ ಪೊಲೀಸ್ ಠಾಣಾಧಿಕಾರಿ ಅನಿಲ್ ಬೆಹ್ರಾನಿ, ಅಪಘಾತದಲ್ಲಿ ಗಾಯಗೊಂಡವರಿಗೆ ಪರಿಹಾರ ಕಾರ್ಯ ವನ್ನು ಪ್ರಾರಂಭಿಸಲಾಗಿದೆ. ದುರಂತದಲ್ಲಿ ಮೂವರು ಸಾವನ್ನಪ್ಪಿದ್ದು, ಆರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಎಲ್ಲ ಕಾರ್ಮಿಕರು ಮಧ್ಯಪ್ರದೇಶದವರಾಗಿದ್ದು, ಹೆದ್ದಾರಿಯಲ್ಲಿ ಕೆಲಸ ಮಾಡಲು ಬಂದಿದ್ದರು.
ಮೃತರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ. ಅಪಘಾತದ ಸುದ್ದಿ ತಿಳಿದ ತಕ್ಷಣ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದರು. ಈ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಟ್ರಕ್ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಮೃತರ ಸಂಬಂಧಿಗಳಿಗೆ ಮಾಹಿತಿ ಒದಗಿಸುವ ಪ್ರಯತ್ನದಲ್ಲಿದ್ದಾರೆ.