ಜಮ್ಮು: ಪವಿತ್ರ ಹಿಮಲಿಂಗ ಅಮರನಾಥ ಮಂದಿರಕ್ಕೆ 4,889 ಯಾತ್ರಿಗಳನ್ನು ಒಳಗೊಂಡ ತಂಡವು ಭಾನುವಾರ ಪ್ರಯಾಣ ಬೆಳಿಸಿತು.
ಮೂಲ ಶಿಬಿರದಿಂದ ಪಹಲ್ಗಾಮ್ ಹಾಗೂ ಬಾಲ್ಟಾಲ್ ಮಾರ್ಗದ ಮೂಲಕ ಯಾತ್ರಾರ್ಥಿಗಳು ತೆರಳಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಮ್ಮುವಿನ ಭಗವತಿ ಮೂಲ ಶಿಬಿರದಿಂದ 187 ವಾಹನಗಳ ಬೆಂಗಾವಲು ಪಡೆಗಳ ಬಿಗಿ ಭದ್ರತೆಯೊಂದಿಗೆ ನಸುಕಿನ ವೇಳೆ 3.30ಕ್ಕೆ ಮೂಲ ಶಿಬಿರದಿಂದ ಹೊರಟಿದ್ದಾರೆ ಎಂದು ತಿಳಿಸಿದ್ದಾರೆ.
500 ಮಹಿಳೆಯರು, 11 ಮಕ್ಕಳು ಸೇರಿದಂತೆ 2,993 ಯಾತ್ರಿಕರು ಸಾಂಪ್ರದಾಯಿಕ 48 ಕಿ.ಮೀ. ಉದ್ದದ ಪಹಲ್ಗಾಮ್ ಮಾರ್ಗದಲ್ಲಿ ತೆರಳಿದರೆ, 1,896 ಯಾತ್ರಿಕರು 14 ಕಿ.ಮೀ. ಅಂತರದ ಕಡಿದಾದ ಬಾಲ್ಟಾಲ್ ಮಾರ್ಗವನ್ನು ಆಯ್ದುಕೊಂಡಿದ್ದಾರೆ.
ಇದರೊಂದಿಗೆ ಜಮ್ಮುವಿನಿಂದ ಯಾತ್ರೆ ಆರಂಭಿಸಿದವರ ಸಂಖ್ಯೆ 91,202ಕ್ಕೆ ತಲುಪಿದೆ. ಉಳಿದವರು ಮೂಲ ಶಿಬಿರಕ್ಕೆ ನೇರವಾಗಿ ತಲುಪಿದ್ದಾರೆ.
ಜೂ. 29ರಂದು ಅಮರನಾಥ ಯಾತ್ರೆ ಆರಂಭಗೊಂಡಿದ್ದು, ಇಲ್ಲಿಯವರೆಗೆ 2.97 ಲಕ್ಷ ಮಂದಿ ಯಾತ್ರೆ ಬೆಳೆಸಿದ್ದಾರೆ. ಆಗಸ್ಟ್ 19ಕ್ಕೆ ಯಾತ್ರೆ ಕೊನೆಗೊಳ್ಳ ಲಿದೆ.
3,880 ಮೀಟರ್ ಎತ್ತರದ ಪವಿತ್ರ ಗುಹೆ ದೇಗುಲಕ್ಕೆ ಕಳೆದ ವರ್ಷ 4.5 ಲಕ್ಷ ಭಕ್ತರು ಭೇಟಿ ನೀಡಿ ಶಿವನ ದರ್ಶನ ಪಡೆದಿದ್ದರು.