ಅಮರಾವತಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಂಬಟಿ ರಾಯುಡು ಅವರು, ಆಂಧ್ರ ಪ್ರದೇಶದ ವೈಎಸ್‌ಆರ್ ಕಾಂಗ್ರೆಸ್ ಪಕ್ಷವನ್ನು ತೊರೆದು ರಾಜಕೀಯದಿಂದ ವಿರಾಮ ತೆಗೆದುಕೊಂಡಿದ್ದಾರೆ.
‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ನಾನು ವೈಎಸ್‌ಆರ್‌ಸಿಪಿ ಪಕ್ಷವನ್ನು ತೊರೆಯಲು ಮತ್ತು ಸ್ವಲ್ಪ ಸಮಯದವರೆಗೆ ರಾಜಕೀಯದಿಂದ ದೂರ ವಿರಲು ನಿರ್ಧರಿಸಿದ್ದೇನೆ. ಮುಂದಿನ ನಡೆ ಕುರಿತು ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಡಿ.29ರಂದು ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ ರೆಡ್ಡಿ ಸಮ್ಮುಖದಲ್ಲಿ ಅಂಬಟಿ ತಿರುಪತಿ ರಾಯುಡು ಅವರು ವೈಎಸ್‌ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಅಂಬಟಿ ರಾಯುಡು ಅವರು ಈಚೆಗೆ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಸಿಪಿಎಲ್) ಸೇಂಟ್ ಕಿಟ್ಸ್ ಮತ್ತು ನೇವಿಸ್ ಪೈರೆಟ್ಸ್ ತಂಡವನ್ನು ಸೇರಿಕೊಂಡಿದ್ದರು.
2023ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಚಾಂಪಿಯನ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಿದ್ದ 37 ವರ್ಷದ ಬ್ಯಾಟರ್ ರಾಯುಡು, ಸೇಂಟ್ ಕಿಟ್ಸ್ ತಂಡದೊಂದಿಗೆ ಸಹಿ ಮಾಡಿದ್ದರು.
ಐಪಿಎಲ್ ಟೂರ್ನಿ ಬಳಿಕ ರಾಯುಡು ಅವರು ಅಮೆರಿಕದ ಮೇಜರ್ ಕ್ರಿಕೆಟ್ ಲೀಗ್‌ನಲ್ಲಿ (ಎಂಎಲ್‌ಸಿ) ಚೆನ್ನೈ ಸೂಪರ್ ಕಿಂಗ್ಸ್‌ನ ಸೋದರ ಫ್ರಾಂಚೈಸಿ ಟೆಕ್ಸಾ ಸೂಪರ್ ಕಿಂಗ್ಸ್ ಜತೆ ಸಹಿ ಮಾಡಿದ್ದರು.