Wednesday, 18th December 2024

Amit Shah: ಅಂಬೇಡ್ಕರ್‌ ವಿರೋಧಿ ಕಾಂಗ್ರೆಸ್‌ನಿಂದ ಸುಳ್ಳು ಮಾಹಿತಿ; ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ ಅಮಿತ್‌ ಶಾ ಹೇಳಿದ್ದೇನು?

Amit Shah

ಹೊಸದಿಲ್ಲಿ: ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ (BR Ambedkar) ಅವರ ಕುರಿತು ರಾಜ್ಯಸಭೆಯಲ್ಲಿ ಡಿ. 17ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ನೀಡಿರುವ ವಿವಾದಾತ್ಮಕ ಹೇಳಿಕೆ ಇದೀಗ ವ್ಯಾಪಕ ವಿರೋಧಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ (Congress) ನಾಯಕರು ಕಿಡಿ ಕಾರಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಮಿತ್‌ ಶಾ ಅವರು ಕಾಂಗ್ರೆಸ್‌ ತಪ್ಪು ಮಾಹಿತಿಯನ್ನು ಹರಡುತ್ತಿದೆ ಎಂದು ಹೇಳಿದ್ದಾರೆ. ʼʼಸಂವಿಧಾನ ವಿರೋಧಿ ಹಾಗೂ ಅಂಬೇಡ್ಕರ್ ವಿರೋಧಿ ಕಾಂಗ್ರೆಸ್ ಸುಳ್ಳುಗಳನ್ನು ಹರಡುತ್ತಿದೆ. ನಾನು ಅಂಬೇಡ್ಕರ್ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ನನ್ನ ಮಾತನ್ನು ತಿರುಚಲಾಗಿದೆʼʼ ಎಂದು ಸ್ಪಷ್ಟನೆ ನೀಡಿದ್ದಾರೆ.

ದಿಲ್ಲಿಯಲ್ಲಿ ನಡೆದ ಪ್ರತಿಕಾಗೋಷ್ಟಿಯಲ್ಲಿ ಅವರು ಮಾತನಾಡಿ ಕಾಂಗ್ರೆಸ್‌ ಸುಳ್ಳು ಮಾಹಿತಿ ಮೂಲಕ ಜನರ ಹಾದಿ ತಪ್ಪಿಸುತ್ತಿದೆ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಪಕ್ಷವು ಸಂಸತ್ತಿನಲ್ಲಿ ನಾನು ಆಡಿದ ಮಾತುಗಳನ್ನು ತಿರುಚಿದೆ ಮತ್ತು ಅಂಬೇಡ್ಕರ್ ವಿರೋಧಿ ನಿಲುವನ್ನು ಮತ್ತೊಮ್ಮೆ ಸಾಬಿತುಪಡಿಸಿದೆ ಎಂದು ಆರೋಪಿಸಿದ್ದಾರೆ.

ಅಮಿತ್‌ ಶಾ ಹೇಳಿದ್ದೇನು?

“ಅಂಬೇಡ್ಕರ್‌ ಅವರಿಗೆ ಭಾರತ ರತ್ನ ನೀಡುವ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್‌ ನಿರ್ಲಕ್ಷ್ಯ ತೋರಿದೆ. ಬದಲಾಗಿ ಕಾಂಗ್ರೆಸ್‌ ನಾಯಕರು ಅನೇಕ ಬಾರಿ ತಮಗೆ ತಾವೇ ಭಾರತ ರತ್ನವನ್ನು ನೀಡಿದ್ದಾರೆ. 1955ರಲ್ಲಿ ಸ್ವತಃ ನೆಹರೂ ಅವರೇ ಭಾರತ ರತ್ನವನ್ನು ಸ್ವೀಕರಿಸಿದರು. ಇಂದಿರಾ ಗಾಂಧಿ 1971ರಲ್ಲಿ ಭಾರತ ರತ್ನವನ್ನು ಪಡೆದುಕೊಂಡರು ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್‌ ಅವರಿಗೆ ಕೊನೆಗೆ 1990ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಲಾಯಿತು. ಆಗ ಕಾಂಗ್ರೆಸ್ ಅಧಿಕಾರದಲ್ಲಿ ಇರಲಿಲ್ಲ ಎನ್ನುವುದು ಗಮನಿಸಬೇಕಾದ ವಿಷಯ. ಆ ವೇಳೆ ಬಿಜೆಪಿ ಬೆಂಬಲಿತ ಸರ್ಕಾರವಿತ್ತು. ಅಂಬೇಡ್ಕರ್ ಬಗ್ಗೆ ನೆಹರೂ ಅವರ ದ್ವೇಷ ಎಲ್ಲರಿಗೂ ತಿಳಿದಿದೆʼʼ ಎಂದು ಅಮಿತಾ ಶಾ ವಾಗ್ದಾಳಿ ನಡೆಸಿದ್ದಾರೆ.

ಕೈ ಪಡೆ ವಿರುದ್ಧ ಹರಿಹಾಯ್ದ ಅವರು, ʼʼಕಾಂಗ್ರೆಸ್‌ ಬಿ.ಆರ್‌.ಅಂಬೇಡ್ಕರ್‌ ವಿರೋಧಿ ಮಾತ್ರವಲ್ಲ ಮೀಸಲಾತಿ ಮತ್ತು ಸಂವಿಧಾನವನ್ನೂ ವಿರೋಧಿಸುತ್ತಿದೆ. ಕಾಂಗ್ರೆಸ್‌ ನಾಯಕರು ವೀರ ಸಾವರ್ಕರ್‌ ಅವರನ್ನೂ ಅವಮಾನಿಸಿದೆ. ತುರ್ತು ಪರಿಸ್ಥಿತಿ ಹೇರುವ ಮೂಲಕ ಸಂವಿಧಾನವನ್ನೂ ವಿರೋಧಿಸಿದೆʼʼ ಎಂದು ಹೇಳಿದ್ದಾರೆ.

ʼʼನನ್ನ ಹೇಳಿಕೆಯನ್ನು ತಿರುಚಿ ಪ್ರಸ್ತುತಪಡಿಸಲಾಗಿದೆ. ಈ ಹಿಂದೆ ಕಾಂಗ್ರೆಸ್‌ ಪ್ರಧಾನಿ ನರೇಂದ್ರ ಮೋದಿ ಅವರ ಎಡಿಟೆಡ್ ಹೇಳಿಕೆಗಳನ್ನು ಬಿಡುಗಡೆ ಮಾಡಿತ್ತು. ಚುನಾವಣೆ ನಡೆಯುತ್ತಿರುವಾಗ ನನ್ನ ಹೇಳಿಕೆಯನ್ನೂ ಎಐ ಬಳಸಿ ಎಡಿಟ್ ಮಾಡಲಾಗಿತ್ತು. ಇಂದು ಅವರು ನನ್ನ ಹೇಳಿಕೆಯನ್ನು ತಿರುಚಿ ಸುಳ್ಳು ಹರಡುತ್ತಿದ್ದಾರೆ. ನನ್ನ ಸಂಪೂರ್ಣ ಹೇಳಿಕೆಯನ್ನು ಸಾರ್ವಜನಿಕರ ಮುಂದೆ ಇಡಲು ನಾನು ವಿನಂತಿಸುತ್ತೇನೆʼʼ ಎಂದು ಸ್ಪಷ್ಟನೆ ನೀಡಿದ್ದಾರೆ.

ಏನಿದು ವಿವಾದ?

ರಾಜ್ಯಸಭೆಯಲ್ಲಿ ಭಾಷಣ ಮಾಡುವ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ಅಮಿತ್ ಶಾ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. “ಇತ್ತೀಚೆಗೆ ಅಂಬೇಡ್ಕರ್ ಜಪ ಮಾಡುವುದು ಫ್ಯಾಶನ್ ಆಗಿದೆ. ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂದು ಜಪಿಸುತ್ತಾರೆ. ಇದರ ಬದಲು ದೇವರ ನಾಮಸ್ಮರಣೆ ಮಾಡಿದ್ದರೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತಿತ್ತು” ಎಂದು ಹೇಳಿದ್ದರು. “ಈ ಹೇಳಿಕೆ ಅಂಬೇಡ್ಕರ್‌ಗೆ ಮಾಡಿದ ಅವಮಾನ. ಶಾ ಕ್ಷಮೆ ಕೇಳಬೇಕು” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದರು. ಅಲ್ಲದೆ ಹಲವು ವಿಪಕ್ಷಗಳ ನಾಯಕರು ಶಾ ಅವರ ರಾಜೀನಾಮೆಗೂ ಪಟ್ಟು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಅಮಿತ್‌ ಶಾ ಪ್ರತಿಕಾಗೋಷ್ಟಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Amit Shah: ಅಂಬೇಡ್ಕರ್‌ ಕುರಿತು ಶಾ ವಿವಾದದ ಕಿಡಿ; ಸಂಸತ್‌ನಲ್ಲಿ ಕೋಲಾಹಲ- ರಾಜ್ಯಸಭೆ ಅಧಿವೇಶನ ಮುಂದೂಡಿಕೆ