Monday, 7th October 2024

Amit Shah: ಮೋದಿ ವಿರುದ್ಧ ಖರ್ಗೆ ಹೇಳಿಕೆ ಅಸಹ್ಯಕರ; ಅಮಿತ್‌ ಶಾ ತಿರುಗೇಟು

amit shah

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಮುನ್ನ ನಾನು ಸಾಯುವುದಿಲ್ಲ ಎಂದು ಹೇಳಿಕೆ ಕೊಟ್ಟಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge)ಯವರ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಆಕ್ಷೇಪ ವ್ಯಕ್ತಪಡಿಸಿದ್ದು, ರಾಜಕೀಯ ‍ದ್ವೇಷವನ್ನು ಪ್ರದರ್ಶಿಸಬೇಡಿ ಎಂದು ಕಿವಿಮಾತು(Shah v/s Kharge) ಹೇಳಿದ್ದಾರೆ. ಭಾನುವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಖರ್ಗೆ ಅವರು ಅಸ್ವಸ್ಥರಾದಾದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದರು.

ಇದೀಗ ಈ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅಮಿತ್‌ ಶಾ, ನಿನ್ನೆ, ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಭಾಷಣದಲ್ಲಿ ತಮ್ಮ ಪಕ್ಷದ ಇತರೆ ನಾಯಕರನ್ನು ಮೀರಿಸುವಂತೆ ಹೇಳಿಕೆ ಕೊಟ್ಟಿದ್ದಾರೆ. ಅವರು ಪ್ರಧಾನಿ ಮೋದಿಯನ್ನು ಅಧಿಕಾರದಿಂದ ತೆಗೆದುಹಾಕಿದ ನಂತರವೇ ಸಾಯುವುದಾಗಿ ಹೇಳುವ ಮೂಲಕ ತಮ್ಮ ವೈಯಕ್ತಿಕ ಆರೋಗ್ಯ ವಿಷಯಗಳಿಗೆ ಅನಗತ್ಯವಾಗಿ ಪ್ರಧಾನಿ ಮೋದಿಯನ್ನು ಎಳೆದು ತಂದಿದ್ದಾರೆ. ಈ ಕಾಂಗ್ರೆಸ್ಸಿಗರು ಪ್ರಧಾನಿ ಮೋದಿಯವರ ಬಗ್ಗೆ ಎಷ್ಟು ದ್ವೇಷ ಮತ್ತು ಭಯವನ್ನು ಹೊಂದಿದ್ದಾರೆ, ಮತ್ತು ಸದಾ ಪ್ರಧಾನಿ ಮೋದಿ ಕುರಿತಾಗಿಯೇ ಯೋಚನೆ ಮಾಡುತ್ತಿರುತ್ತಾರೆ ಎಂಬುದಕ್ಕೆ ಇದು ಸಾಕ್ಷಿ ಎಂದಿದ್ದಾರೆ.

ಖರ್ಗೆ ಜೀ ಅವರ ಆರೋಗ್ಯಕ್ಕಾಗಿ, ಮೋದಿ ಜೀ ಪ್ರಾರ್ಥಿಸುತ್ತಾರೆ, ನಾನು ಪ್ರಾರ್ಥಿಸುತ್ತೇನೆ ಮತ್ತು ನಾವೆಲ್ಲರೂ ಅವರು ದೀರ್ಘ, ಆರೋಗ್ಯಕರ ಜೀವನವನ್ನು ನಡೆಸಬೇಕೆಂದು ಪ್ರಾರ್ಥಿಸುತ್ತೇವೆ. ಅವರು ಹಲವು ವರ್ಷಗಳ ಕಾಲ ಬದುಕಲಿ ಮತ್ತು 2047 ರ ವೇಳೆಗೆ ವಿಕ್ಷಿತ್ ಭಾರತವನ್ನು ರಚಿಸಲು ಅವರು ಇರಲೇಬೇಕು. ಖರ್ಗೆಯವರ ಹೇಳಿಕೆಗಳು ಕಾಂಗ್ರೆಸ್ ಮತ್ತು ಅದರ ನಾಯಕರು ಪ್ರಧಾನಿಯ ಬಗ್ಗೆ ಹೊಂದಿರುವ “ದ್ವೇಷ ಮತ್ತು ಭಯ” ವನ್ನು ಪ್ರತಿಬಿಂಬಿಸುತ್ತವೆ ಎಂದು ಶಾ ಆರೋಪಿಸಿದರು.

ಖರ್ಗೆ ಹೇಳಿದ್ದೇನು?

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾನುವಾರ ಪಕ್ಷದ ಪರವಾಗಿ ಪ್ರಚಾರ ನಡೆಸುತ್ತಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾದ ಘಟನೆ ನಡೆದಿದೆ. ಕಥುವಾದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವಾಗ ಈ ಘಟನೆ ನಡೆದಿದೆ. ಖರ್ಗೆ ಅವರ ಸ್ಥಿತಿಯನ್ನು ನೋಡಿದ ವೇದಿಕೆಯಲ್ಲಿದ್ದ ಹಲವಾರು ನಾಯಕರು ಅವರಿಗೆ ನೆರವಾದರು. ಅನಾರೋಗ್ಯದ ಹೊರತಾಗಿಯೂ ಖರ್ಗೆ ತಮ್ಮ ಭಾಷಣ ಮುಂದುವರಿಸಿದರು. ನಾವು ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸಲು ಹೋರಾಡುತ್ತೇವೆ. ನನಗೆ 83 ವರ್ಷ ವಯಸ್ಸು, ನಾನು ಬೇಗ ಸಾಯುವುದಿಲ್ಲ. ಪ್ರಧಾನಿ ಮೋದಿಯನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೂ ನಾನು ಜೀವಂತವಾಗಿರುತ್ತೇನೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: Mallikarjun Kharge : ತಮ್ಮನ್ನುಅಧಿಕಾರದಿಂದ ಇಳಿಸುವ ಶಪಥ ಮಾಡಿದ್ದ ಖರ್ಗೆಗೆ ಫೋನ್ ಮಾಡಿ ಆರೋಗ್ಯ ವಿಚಾರಿಸಿದ ಮೋದಿ