Thursday, 12th December 2024

ಜಮ್ಮು-ಕಾಶ್ಮೀರವನ್ನು ಶಾಂತಿಯುತ ಸ್ಥಳವನ್ನಾಗಿ ಮಾಡಲು ಬಯಸುತ್ತೇವೆ: ಅಮಿತ್ ಶಾ

ಶ್ರೀನಗರ: ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿ ದ್ದಾರೆ.

ಮೂರು ದಿನಗಳ ಕಾಶ್ಮೀರ ಪ್ರವಾಸ ಕೈಗೊಂಡಿರುವ ಅಮಿತ್ ಶಾ, ಬಾರಾಮುಲ್ಲಾದಲ್ಲಿ ರಾಜಕೀಯ ರ‍್ಯಾಲಿಯನ್ನುದ್ದೇಶಿಸಿ ಮಾತ ನಾಡಿ, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಯೋತ್ಪಾದನೆಯನ್ನು ಸಹಿಸುವುದಿಲ್ಲ. ಬದಲಾಗಿ ಭಯೋ ತ್ಪಾದನೆ ಕೊನೆಗೊಳಿಸಲು, ಅಳಿಸಿಹಾಕಲು ಬಯಸುತ್ತದೆ. ನಾವು (ಬಿಜೆಪಿ) ಜಮ್ಮು ಮತ್ತು ಕಾಶ್ಮೀರ ವನ್ನು ದೇಶದ ಅತ್ಯಂತ ಶಾಂತಿಯುತ ಸ್ಥಳವನ್ನಾಗಿ ಮಾಡಲು ಬಯಸುತ್ತೇವೆ’ ಎಂದು ಶಾ ಭರವಸೆ ನೀಡಿದರು.

1990ರ ದಶಕದಿಂದ ಈವರೆಗೆ ಜಮ್ಮು -ಕಾಶ್ಮೀರದಲ್ಲಿ ಭಯೋತ್ಪಾದನೆಯಿಂದಾಗಿ 42,000 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭಯೋತ್ಪಾದನೆಯಿಂದ ಯಾರಿಗಾದರೂ ಪ್ರಯೋಜನವಾಗಿದೆಯೇ ಎಂದು ಶಾ ಪ್ರಶ್ನಿಸಿದರು.

‘ಕೆಲವರು ನಾವು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕು ಎಂದು ಹೇಳುತ್ತಾರೆ. ನಾವೇಕೆ ಪಾಕಿಸ್ತಾನದೊಂದಿಗೆ ಮಾತನಾಡ ಬೇಕು? ನಾವು ಮಾತನಾಡುವುದಿಲ್ಲ. ನಾವು ಬಾರಾಮುಲ್ಲಾದ ಜನರೊಂದಿಗೆ ಮಾತನಾಡುತ್ತೇವೆ, ನಾವು ಕಾಶ್ಮೀರದ ಜನರೊಂದಿಗೆ ಮಾತನಾಡುತ್ತೇವೆ’ ಎಂದು ಶಾ ಕಿಡಿ ಕಾರಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಯಾಗದೆ ಇರುವುದಕ್ಕೆ ನ್ಯಾಷನಲ್ ಕಾನ್ಫರೆನ್ಸ್‌ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಮತ್ತು ನೆಹರು-ಗಾಂಧಿ (ಕಾಂಗ್ರೆಸ್) ಅವರ ಕುಟುಂಬಸ್ಥರೇ ಕಾರಣ ಎಂದು ವಾಗ್ದಾಳಿ ನಡೆಸಿದರು.

ಕೆಲವರು ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ. ಆದರೆ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಎಷ್ಟು ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವಿದೆ ಎಂಬುದನ್ನು ತಿಳಿಯಲು ಬಯಸಿದ್ದೇನೆ ಎಂದು ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದ ಶಾ, ‘ಕಳೆದ ಮೂರು ವರ್ಷಗಳಲ್ಲಿ ಕಾಶ್ಮೀರದ ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವಿದೆ ಎಂದು ನಾವು ಖಚಿತಪಡಿಸಿದ್ದೇವೆ’ ಎಂದು ತಿರುಗೇಟು ನೀಡಿದ್ದಾರೆ.