Thursday, 19th September 2024

Amit Shah: ರಾಜ್ಯ ಸ್ಥಾನಮಾನದ ಹೆಸರಲ್ಲಿ ಜನರನ್ನು ಮೂರ್ಖರನ್ನಾಗಿಸುವುದನ್ನು ನಿಲ್ಲಿಸಿ; ಜಮ್ಮು& ಕಾಶ್ಮೀರದಲ್ಲಿ ಅಮಿತ್‌ ಶಾ ಗುಡುಗು

Amit Shah

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu and Kashmir) ವಿಧಾನಸಭಾ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ರಾಜಕೀಯ ಚಟುವಟಿಕೆ ಗರಿಗೆದರಿದೆ. ಎರಡು ದಿನಗಳ ಭೇಟಿಗಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ಗೃಹ ಸಚಿವ, ಬಿಜೆಪಿ ನಾಯಕ ಅಮಿತ್‌ ಶಾ (Amit Shah) ಅವರು ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿ, ಕಾಂಗ್ರೆಸ್‌ (Congress) ಮತ್ತು ನ್ಯಾಷನಲ್ ಕಾನ್ಫರೆನ್ಸ್ (National Conference) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸ್ಥಾನಮಾನ (Statehood)ದ ಹೆಸರಿನಲ್ಲಿ ಜನರನ್ನು ಮೂರ್ಖರನ್ನಾಗಿಸುವುದನ್ನು ನಿಲ್ಲಿಸಿ ಎಂದು ಗುಡುಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಮತ್ತೊಮ್ಮೆ ನೀಡುವುದಾಗಿ ಭರವಸೆ ನೀಡಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ (Omar Abdullah) ಅವರನ್ನು ತರಾಟೆಗೆ ತೆಗೆದುಕೊಂಡ ಅಮಿತ್ ಶಾ, ಕೇಂದ್ರಕ್ಕೆ ಮಾತ್ರ ಹಾಗೆ ಮಾಡುವ ಅಧಿಕಾರವಿದೆ ಎಂದು ಹೇಳಿದ್ದಾರೆ.

“ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸುವುದಾಗಿ ಹೇಳುತ್ತಿವೆ. ಇದನ್ನು ನೀಡಲು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತ್ರ ಸಾಧ್ಯ. ಆದ್ದರಿಂದ ಜನರನ್ನು ಮೂರ್ಖರನ್ನಾಗಿಸುವುದನ್ನು ನಿಲ್ಲಿಸಿ. ಚುನಾವಣೆಯ ನಂತರ ಸೂಕ್ತ ಸಮಯದಲ್ಲಿ ನಾವು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ನೀಡುತ್ತೇವೆ ಎಂದು ಭರವಸೆ ನೀಡಿದ್ದೇವೆ. ನಾವು ಇದನ್ನು ಸಂಸತ್ತಿನಲ್ಲಿಯೂ ಹೇಳಿದ್ದೇವೆ. ರಾಹುಲ್ ಗಾಂಧಿ ಜನರನ್ನು ದಾರಿ ತಪ್ಪಿಸುವುದನ್ನು ನಿಲ್ಲಿಸಬೇಕು” ಎಂದು ಅಮಿತ್‌ ಶಾ ಹೇಳಿದ್ದಾರೆ.

“ರಾಹುಲ್ ಗಾಂಧಿ ಅವರಿಗೆ ನಾನೊಂದು ಹೇಳ ಬಯಸುತ್ತೇನೆ. ನೀವು ಎಷ್ಟೇ ಪ್ರಯತ್ನ ಮಾಡಿದರೂ ಗುಜ್ಜರ್, ಬಕರ್ವಾಲ್, ಪಹರಿ ಮತ್ತು ದಲಿತ ಸಮುದಾಯಗಳ ಮೀಸಲಾತಿಯನ್ನು ಮುಟ್ಟಲು ನಾವು ಬಿಡುವುದಿಲ್ಲ. ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ನಡೆಯುವುದಿಲ್ಲ” ಎಂದು ಶಾ ಘೋಷಿಸಿದ್ದಾರೆ. ಮುಂಬರುವ ಚುನಾವಣೆ ‘ಐತಿಹಾಸಿಕ’ ಎಂದು ಬಣ್ಣಿಸಿದ ಅವರು, ʼ’ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರವು ತ್ರಿವರ್ಣ ಧ್ವಜದ ಅಡಿಯಲ್ಲಿ ಮತ ಚಲಾಯಿಸಲಿದೆʼʼ ಎಂದು ಹೇಳಿದ್ದಾರೆ.

2019ರ ಆಗಸ್ಟ್‌ನಲ್ಲಿ ಮೋದಿ ಸರ್ಕಾರವು ಭಾರತದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವುದರೊಂದಿಗೆ ಜಮ್ಮು ಮತ್ತು ಕಾಶ್ಮೀರದ ಪ್ರತೇಕ ಧ್ವಜವೂ ತನ್ನ ಅಧಿಕೃತ ಸ್ಥಾನಮಾನವನ್ನು ಕಳೆದುಕೊಂಡಿತ್ತು. 2014ರ ಬಳಿಕ ಇದೇ ಮೊದಲ ಬಾರಿ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಸೆಪ್ಟೆಂಬರ್‌ 18, 25 ಮತ್ತು ಅಕ್ಟೋಬರ್‌ 1ರಂದು ಮತದಾನ ನಡೆದು ಅಕ್ಟೋಬರ್‌ 8ರಂದು ಫಲಿತಾಂಶ ಪ್ರಕಟವಾಗಲಿದೆ.

ಈ ಸುದ್ದಿಯನ್ನೂ ಓದಿ: J&K assembly election : ಆರ್ಟಿಕಲ್‌ 370 ವಾಪಸ್‌ ಇಲ್ಲವೇ ಇಲ್ಲ; ಬಿಜೆಪಿಯಿಂದ ಜಮ್ಮು- ಕಾಶ್ಮೀರ ಚುನಾವಣಾ ಪ್ರಣಾಳಿಕೆ ಬಿಡುಗಡೆ

ಬಿಜೆಪಿ ಪ್ರಣಾಳಿಕೆ ಪ್ರಕಟ

ಶುಕ್ರವಾರ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಪ್ರಕಟಿಸಿದೆ. ಪ್ರಣಾಳಿಕೆ ಬಿಡುಗಡೆ ಬಳಿಕ ಮಾತನಾಡಿದ್ದ ಅಮಿತ್‌ ಶಾ, ʼʼರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಪುನಃಸ್ಥಾಪಿಸಲು ಸಾಧ್ಯವೇ ಇಲ್ಲ. ಅದೀಗ ಇತಿಹಾಸವಷ್ಟೇʼʼ ಎಂದು ಸ್ಪಷ್ಟಪಡಿಸಿದ್ದರು.