Wednesday, 18th December 2024

Amit Shah: ಅಂಬೇಡ್ಕರ್‌ ಕುರಿತು ಶಾ ವಿವಾದದ ಕಿಡಿ; ಸಂಸತ್‌ನಲ್ಲಿ ಕೋಲಾಹಲ- ರಾಜ್ಯಸಭೆ ಅಧಿವೇಶನ ಮುಂದೂಡಿಕೆ

ನವದೆಹಲಿ: ನಿನ್ನೆ(ಡಿ.17) ಸಂಸತ್ತಿನಲ್ಲಿ ಸಂವಿಧಾನ ಶಿಲ್ಪಿ ಬಿ. ಆರ್ ಅಂಬೇಡ್ಕರ್(BR Ambedkar) ಅವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದಕ್ಕೆ ಕಾಂಗ್ರೆಸ್(Congress) ಪಕ್ಷದ ಹಲವು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಅಮಿತ್‌ ಶಾ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್‌ ನಾಯಕರು ಪಟ್ಟುಹಿಡಿದಿದ್ದಾರೆ.

ಅಮಿತ್ ಶಾ ತಮ್ಮ ಸಂಸತ್(Parliament) ಭಾಷಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಆಡಿದ ಮಾತುಗಳು ಭಾರೀ ರಾಜಕೀಯ ಕೋಲಾಹಲವನ್ನು ಸೃಷ್ಟಿಸಿದ್ದು,ಬಿಜೆಪಿಯು ಭಾರತದ ಸಂವಿಧಾನ ಶಿಲ್ಪಿಯ ಬಗ್ಗೆ ಅಸಡ್ಡೆಯನ್ನು ಹೊಂದಿದೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು.

ಮಂಗಳವಾರ(ಡಿ.17) ಸಂವಿಧಾನ ಕುರಿತ ಚರ್ಚೆ ವೇಳೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು “ಇತ್ತೀಚೆಗೆ ಅಂಬೇಡ್ಕರ್ ಜಪ ಮಾಡುವುದು ಫ್ಯಾಶನ್ ಆಗಿದೆ. ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಎಂದು ಜಪಿಸುತ್ತಾರೆ. ಇದರ ಬದಲು ದೇವರ ನಾಮಸ್ಮರಣೆ ಮಾಡಿದ್ದರೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತಿತ್ತು” ಎಂದು ಹೇಳಿದ್ದಾರೆ. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. “ಈ ಹೇಳಿಕೆ ಅಂಬೇಡ್ಕರ್‌ಗೆ ಮಾಡಿದ ಅವಮಾನ. ಶಾ ಕ್ಷಮೆ ಕೇಳಬೇಕು” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ. ಇನ್ನು ವಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi), “ಮನುಸ್ಮೃತಿ ಪ್ರವರ್ತಕರಿಗೆ ಅಂಬೇಡ್ಕರ್ ಸಂವಿಧಾನದ ಬಗ್ಗೆ ಸದಾ ತಕರಾರು ಇರುತ್ತದೆ” ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಅವರು ಶಾ ಅವರ ಹೇಳಿಕೆಯನ್ನು ಅತ್ಯಂತ ಅಸಹ್ಯಕರ ಮತ್ತು ಇದು ಬಿಜೆಪಿ-ಆರ್‌ಎಸ್‌ಎಸ್ ಅಂಬೇಡ್ಕರ್ ಬಗ್ಗೆ ಹೊಂದಿರುವ ದ್ವೇಷವನ್ನು ತೋರಿಸುತ್ತದೆ ಎಂದು ಆರೋಪಿಸಿದ್ದಾರೆ. “ಅವರ ಹೆಸರು ಬಳಸಿಕೊಂಡು ದ್ವೇಷ ಸಾಧಿಸುತ್ತಿದ್ದಾರೆ. ಇದೇ ಜನರು ಈ ಹಿಂದೆ ಬಾಬಾ ಸಾಹೇಬ್ ಅವರ ಪ್ರತಿಕೃತಿಗಳನ್ನು ಸುಡುತ್ತಿದ್ದರು. ಬಾಬಾ ಸಾಹೇಬ್ ನೀಡಿದ ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಮಾತನಾಡುತ್ತಿದ್ದರು. ಈಗಾಗಲೇ ಜನರು ತಕ್ಕ ಪಾಠ ಕಲಿಸಿದ್ದಾರೆ. ಹೀಗೆಲ್ಲ ಮಾತನಾಡುವುದು ನಾಚಿಕೆಗೇಡಿನ ಸಂಗತಿ” ಜೈರಾಮ್‌ ರಮೇಶ್‌ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯಸಭೆ ಅಧಿವೇಶನ ಮುಂದೂಡಿಕೆ

ಅಂಬೇಡ್ಕರ್‌ ಕುರಿತ ಹೇಳಿಕೆಗೆ ಅಮಿತ್‌ ಶಾ ಅವರು ತಕ್ಷಣ ಕ್ಷಮೆಯಾಚಿಸಲೇಬೇಕೆಂದು ಪ್ರತಿಪಕ್ಷ ನಾಯಕರು ಪಟ್ಟು ಹಿಡಿದಿದ್ದಾರೆ. ಇದರಿಂದ ಸದನದಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು. ಅಮಿತ್‌ ಶಾ ವಿರುದ್ಧ ಪ್ರತಿಪಕ್ಷ ನಾಯಕರು ಘೋಷಣೆ ಕೂಗಲಾರ‍ಂಭಿಸಿದರು. ಹೀಗಾಗಿ ಸಭಾಧ್ಯಕ್ಷರು ರಾಜ್ಯಸಭೆ ಅಧೀವೇಶನವನ್ನು ಮಧ್ಯಾಹ್ನ 2ಗಂಟೆಗೆ ಮುಂದೂಡಲಾಗಿದೆ.

ಈ ಸುದ್ದಿಯನ್ನೂ ಓದಿ:Laapataa Ladies: ಆಸ್ಕರ್‌ ಪ್ರ‍ಶಸ್ತಿ ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್