Thursday, 12th December 2024

AMU Row: ಬಾಂಗ್ಲಾದೇಶ ವಿದ್ಯಾರ್ಥಿಗಳಿಂದ ಹಿಂದೂ ವಿರೋಧಿ ಪೋಸ್ಟ್- AMUನಲ್ಲಿ ಭುಗಿಲೆದ್ದ ಆಕ್ರೋಶ

ಲಖನೌ: ಬಾಂಗ್ಲಾದೇಶದ(Bangladesh) ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಇಸ್ಕಾನ್(‌Iskcon) ಮತ್ತು ಭಾರತದ ಹಿಂದೂ(Hindu) ಮಹಿಳೆಯರನ್ನು ನಿಂದಿಸಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದು, ಇದೀಗ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ (AMU Row) ವಿವಾದ ಭುಗಿಲೆದ್ದಿದೆ. ಬಾಂಗ್ಲಾದೇಶದ ಮುಸ್ಲಿಂ ವಿದ್ಯಾರ್ಥಿಗಳು ಇಸ್ಕಾನ್‌ ಅನ್ನು ಉಗ್ರಗಾಮಿ ಸಂಘಟನೆ ಎಂದು ಕರೆದಿದ್ದು,ಹಿಂದೂ ಮಹಿಳೆಯರ ಬಗ್ಗೆ ಅಸಭ್ಯವಾದ ರೀತಿಯಲ್ಲಿ ಹೇಳಿಕೆಗಳನ್ನು ನೀಡಿ ಪೋಸ್ಟ್‌ ಶೇರ್‌ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಬಾಂಗ್ಲಾ ವಿದ್ಯಾರ್ಥಿಗಳ ಪೋಸ್ಟ್‌ ಈಗ ಎಲ್ಲೆಡೆ ವೈರಲ್‌ ಆಗಿದ್ದು, ಅಲಿಗಢ ವಿಶ್ವವಿದ್ಯಾನಿಲಯದಲ್ಲಿ ಆಕ್ರೋಶದ ಜ್ವಾಲೆ ಎದ್ದಿದೆ. ಯೂನಿವರ್ಸಿಟಿಯಲ್ಲಿ ಸಾವಿರಾರು ಹಿಂದೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ಮಾಹಿತಿಯಿದೆ. ಬಾಂಗ್ಲಾದೇಶದ ವಿದ್ಯಾರ್ಥಿಗಳನ್ನು ಕೂಡಲೇ ಹೊರ ಹಾಕಬೇಕೆಂದು ಹಲವರು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ದೇಶ ಮತ್ತು ಮಹಿಳೆಯರ ವಿರುದ್ಧ ಹಿಂದೂ ವಿರೋಧಿ ಮತ್ತು ಭಾರತ ವಿರೋಧಿ ಹೇಳಿಕೆಗಳನ್ನು ನೀಡಿದ ವಿದ್ಯಾರ್ಥಿಗಳನ್ನು ಶಮ್ಯುಲ್, ರಿಫತ್ ರೆಹಮಾನ್ ಮತ್ತು ಮಹಮೂದ್ ಹಸನ್ ಅರಾಫತ್ ಎಂದು ಗುರುತಿಸಲಾಗಿದೆ.

ವಿವಾದಿತ ಪೋಸ್ಟ್‌ಗಳಲ್ಲಿ ಒಬ್ಬ ಮುಸ್ಲಿಂ ವಿದ್ಯಾರ್ಥಿಯು ಇಸ್ಕಾನ್ ಅನ್ನು “ಉಗ್ರವಾದಿ ಹಿಂದುತ್ವ ಸಂಘಟನೆ” ಎಂದು ಕರೆದಿದ್ದು, ಅದನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾನೆ. ಇತರ ಇಬ್ಬರು ಬಾಂಗ್ಲಾದೇಶದ ವಿದ್ಯಾರ್ಥಿಗಳು ಭಾರತೀಯ ಮಹಿಳೆಯರ ಬಗ್ಗೆ ಅಸಭ್ಯ ಮತ್ತು ಅಶ್ಲೀಲ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಉತ್ತರಪ್ರದೇಶದಲ್ಲಿ ಹಸುವಿನ ಸಗಣಿ ತಿನ್ನುವ ಪ್ರವೃತ್ತಿಯ ಬಗ್ಗೆಯೂ ವಿದ್ಯಾರ್ಥಿಯೊಬ್ಬ ಅವಹೇಳನಕಾರಿ ಹೇಳಿಕೆ ನೀಡಿದ್ದಾನೆ. ಇದು ಹಿಂದೂ ವಿದ್ಯಾರ್ಥಿಗಳನ್ನು ಕೆರಳಿಸಿದೆ. ಫೇಸ್‌ಬುಕ್‌ನಲ್ಲಿನ ಪೋಸ್ಟ್ ನಲ್ಲಿ, “ನಾವು ಇಸ್ಕಾನ್ ಅನ್ನು ನಿಷೇಧಿಸಬೇಕೆಂದು ಒತ್ತಾಯಿಸುತ್ತೇವೆ. ಕಾರಣ ಈಗ ಎಲ್ಲರಿಗೂ ಸ್ಪಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ. ಇಸ್ಕಾನ್ ಒಂದು ಮೂಲಭೂತ ಹಿಂದುತ್ವ ಸಂಘಟನೆಯಾಗಿದೆ. ನಾವು ಸಾಮಾನ್ಯ ಹಿಂದೂಗಳನ್ನು ದೂಷಿಸುವುದಿಲ್ಲ ಅವರೊಂದಿಗೆ ಸಂಘರ್ಷವನ್ನೂ ನಡೆಸುವುದಿಲ್ಲ. ನಮ್ಮ ಸಂಘರ್ಷವು ಮೂಲಭೂತವಾದಿಗಳೊಂದಿಗೆ ಮಾತ್ರ ಎನ್ನಲಾಗಿದೆ.

ಅಖಿಲ್ ಕೌಶಲ್, ಹಿತೇಶ್ ಮೇವಾಡ, ಪುನೀತ್, ಪಿಯೂಷ್ ಮತ್ತು ರೋಹಿತ್ ಸೇರಿದಂತೆ ಹಿಂದೂ ವಿದ್ಯಾರ್ಥಿಗಳು ಮಂಗಳವಾರ(ಡಿ.10) ರಾತ್ರಿ ಎಎಂಯು ಪ್ರೊಕ್ಟರ್‌ಗೆ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಲಿಖಿತ ದೂರು ನೀಡಿದ್ದಾರೆ. ಈ ವಿದ್ಯಾರ್ಥಿಗಳು ಇಸ್ಕಾನ್ ಅನ್ನು ಅವಮಾನಿಸುತ್ತಿದ್ದಾರೆ ಮಾತ್ರವಲ್ಲದೆ ಭಾರತ ವಿರೋಧಿ ಹೇಳಿಕೆ ನೀಡುತ್ತಿದ್ದು, ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ಹಿಂಸಾಚಾರಕ್ಕೆ ಉತ್ತೇಜನ ನೀಡುತ್ತಿದ್ದಾರೆ ಎಂದಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಉಪ ಪ್ರಾಕ್ಟರ್ ಪ್ರೊ.ಎಸ್ ನವಾಜ್ ಜೈದಿ ಅವರು ಬಾಂಗ್ಲಾದೇಶಿ ವಿದ್ಯಾರ್ಥಿಗಳ ಮೇಲಿನ ಆರೋಪಗಳನ್ನು ಕೂಲಂಕಷವಾಗಿ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆಯಾಗಲಿದ್ದು, ಆ ನಂತರವೇ ವಿಶ್ವವಿದ್ಯಾಲಯ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Bangladesh Violence: ಬಾಂಗ್ಲಾದೇಶದಲ್ಲಿ ಮತ್ತೊಂದು ಇಸ್ಕಾನ್‌ ದೇವಾಲಯಕ್ಕೆ ಬೆಂಕಿ, ಮೂರ್ತಿ ಭಗ್ನ