Friday, 22nd November 2024

Tirupati Laddoos Row : ತನ್ನ ವಿರುದ್ಧ ಅಪಪ್ರಚಾರ ಮಾಡಿದ ಎಕ್ಸ್‌ ಬಳಕೆದಾರನ ವಿರುದ್ಧ ಕೇಸ್ ದಾಖಲಿಸಿದ ಅಮೂಲ್‌

Tirupati laddoos row

ಬೆಂಗಳೂರು: ತಿರುಪತಿ ದೇವಸ್ಥಾನದ ಲಡ್ಡುಗಳಲ್ಲಿ (Tirupati Laddoos Row) ಬಳಸುವ ತುಪ್ಪವನ್ನು ಅಮೂಲ್‌ ಕಂಪನಿಯು ಪೂರೈಸಿದೆ ಎಂದು ಸುಳ್ಳು ವರದಿ ಮಾಡಿರುವ ವ್ಯಕ್ತಿಯ ವಿರುದ್ಧ ಅಮುಲ್ ಸಂಸ್ಥೆಯು ಅಹಮದಾಬಾದ್‌ನ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಅಮುಲ್‌ನ ಘನತೆಗೆ ಧಕ್ಕೆ ತರಲು ತಪ್ಪು ಮಾಹಿತಿಯನ್ನು ಹರಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ವಿಶ್ವ ಪ್ರಸಿದ್ಧ ದೇವಾಲಯದಲ್ಲಿ ಪ್ರಸಾದವಾಗಿ ನೀಡಲಾಗುವ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಇರುವ ಬಗ್ಗೆ ವಿವಾದ ಸೃಷ್ಟಿಯಾದ ಬೆನ್ನಲ್ಲಿ ಎಕ್ಸ್ ಬಳಕೆದಾರ ಅಮೂಲ್ ವಿರುದ್ಧ ಅಪಪ್ರಚಾರ ಮಾಡಿದ್ದ.

ತಿರುಪತಿ ಪ್ರಸಾದದಲ್ಲಿ ಬಳಸಿದ ತುಪ್ಪವನ್ನು ಕಂಪನಿಯು ಪೂರೈಸಿದೆ ಎಂದು ಸುಳ್ಳು ಹೇಳಲಾಗುತ್ತಿದೆ. ಈ ಮೂಲಕ ಅಮುಲ್ ಅನ್ನು ದೂಷಿಸುವ ಉದ್ದೇಶದಿಂದ ಕೆಲವು ವ್ಯಕ್ತಿಗಳು ಸಾಮಾಜಿಕ ಮಾಧ್ಯಮದಲ್ಲಿ ದಾರಿತಪ್ಪಿಸುವ ಮಾಹಿತಿಯನ್ನು ಪೋಸ್ಟ್ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಫೆಡರೇಶನ್ (ಜಿಸಿಎಂಎಂಎಫ್) ವ್ಯವಸ್ಥಾಪಕ ನಿರ್ದೇಶಕ ಜಯೇನ್ ಮೆಹ್ತಾ ಈ ವಿಷಯದ ಬಗ್ಗೆ ಮಾತನಾಡುತ್ತಾ, “ತಿರುಪತಿ ದೇವಾಲಯದ ಲಡ್ಡುಗಳಲ್ಲಿ ಬಳಸುವ ತುಪ್ಪವು ಕಲಬೆರಕೆಯಾಗಿದೆ ಎಂದು ಆರೋಪಿಸಿ ಹಲವಾರು ದಿನಗಳಿಂದ ನಮ್ಮ ವಿರುದ್ಧ ಪೋಸ್ಟ್‌ಗಳ ಹರಿದಾಡುತ್ತಿವೆ. ಅಮುಲ್ ಎಂದಿಗೂ ತಿರುಪತಿ ದೇವಸ್ಥಾನಕ್ಕೆ ತುಪ್ಪ ಪೂರೈಸಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಅಮುಲ್ ಅನ್ನು ಈ ವಿವಾದಕ್ಕೆ ಎಳೆಯಲು ಮತ್ತು ಅದರ ಖ್ಯಾತಿಯನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದ ಕಾರಣ ನಾವು ಅಹಮದಾಬಾದ್ ಸೈಬರ್ ಕ್ರೈಮ್ ವಿಭಾಗದಲ್ಲಿ ಎಫ್‌ಐಆರ್ ದಾಖಲಿಸಿದ್ದೇವ ಎಂದು ಹೇಳಿದ್ದಾರೆ.

ಅಮುಲ್ 3.6 ಮಿಲಿಯನ್ ರೈತ ಕುಟುಂಬಗಳ ಒಡೆತನದಲ್ಲಿದೆ. ಈ ಸುಳ್ಳು ಪ್ರಚಾರ ಮತ್ತು ತಪ್ಪು ಮಾಹಿತಿಯು ಅವರ ಜೀವನೋಪಾಯದ ಮೇಲೆ ತೀವ್ರ ಪರಿಣಾಮ ಬೀರಬಹುದು, ಅದಕ್ಕಾಗಿಯೇ ಈ ತಪ್ಪು ಮಾಹಿತಿ ಹರಡುವುದನ್ನು ತಡೆಯಲು ನಾವು ಕಾನೂನು ಕ್ರಮ ಕೈಗೊಂಡಿದ್ದೇವೆ. ಅಮುಲ್ ಎಂದಿಗೂ ತಿರುಪತಿ ದೇವಸ್ಥಾನಕ್ಕೆ ತುಪ್ಪವನ್ನು ಪೂರೈಸಿಲ್ಲ ಎಂದು ಜನರಿಗೆ ತಿಳಿಸಲು ನಾವು ನಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಿದ್ದೇವೆ. ನಮ್ಮ ಉತ್ಪನ್ನಗಳು ಅತ್ಯುನ್ನತ ಗುಣಮಟ್ಟದ್ದಾಗಿವೆ. ಎಲ್ಲಾ ಮಾನದಂಡಗಳನ್ನು ಪಾಲಿಸುತ್ತಿದ್ದೇವೆ. ನಾವು ವರ್ಷಗಳಿಂದ ಗ್ರಾಹಕರಿಗೆ ಪ್ರೀಮಿಯಂ ತುಪ್ಪ ತಲುಪಿಸುತ್ತಿದ್ದೇವೆ ಎಂದು ಮೆಹ್ತಾ ಹೇಳಿದರು.

ಇದನ್ನೂ ಓದಿ: Tirupati Laddu : ತಿರುಪತಿ ಲಡ್ಡಿನಲ್ಲಿ ದನದ ಕೊಬ್ಬು ಹಾಕಿದ ಆರೋಪ; ಕೋರ್ಟ್‌ಗೆ ಹೋಗುವೆ ಎಂದ ಜಗನ್ ರೆಡ್ಡಿ

ನಿನ್ನೆ, ಅಮುಲ್ ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಜನಿಕ ಸ್ಪಷ್ಟೀಕರಣ ನೀಡಿದ್ದು, ಕಂಪನಿಯು ತಿರುಪತಿ ಲಡ್ಡು ವಿವಾದದಲ್ಲಿ ಭಾಗಿಯಾಗಿಲ್ಲ ಮತ್ತು ಈ ವಿಷಯಕ್ಕೆ ಸಂಬಂಧಿಸಿದ ಯಾವುದೇ ಉತ್ಪನ್ನಗಳನ್ನು ಪೂರೈಸಿಲ್ಲ ಎಂದು ಹೇಳಿತ್ತು.

ಜಗನ್ ಮೋಹನ್ ರೆಡ್ಡಿ ನೇತೃತ್ವದ ಹಿಂದಿನ ವೈಎಸ್ಆರ್ಸಿಪಿ ಸರ್ಕಾರವು ಶ್ರೀ ವೆಂಕಟೇಶ್ವರ ದೇವಸ್ಥಾನವನ್ನು ಸಹ ಬಿಡಲಿಲ್ಲ ಮತ್ತು ಲಡ್ಡುಗಳನ್ನು ತಯಾರಿಸಲು ಕಳಪೆ ಗುಣಮಟ್ಟದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಿದೆ ಎಂದು ಚಂದ್ರಬಾಬು ನಾಯ್ಡು ಹೇಳಿದ ನಂತರ ಸೆಪ್ಟೆಂಬರ್ 19 ರಂದು ಭಾರಿ ವಿವಾದ ಭುಗಿಲೆದ್ದಿತ್ತು. ನಂತರದ ಪ್ರಯೋಗಾಲಯದ ವರದಿಯು ದೇವಾಲಯದ ಭಕ್ತರಿಗೆ ವಿತರಿಸಲಾದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬಿನ ಉಪಸ್ಥಿತಿಯನ್ನು ದೃಢಪಡಿಸಿತು.

ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಇದನ್ನು “ಗಂಭೀರ ವಿಷಯ” ಎಂದು ಕರೆದಿದೆ ಮತ್ತು ತಿರುಪತಿ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಿದವರಿಗೆ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದೆ.