Thursday, 5th December 2024

ಒಂಬತ್ತು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿ ಪತ್ತೆ

ವಿಜಯವಾಡ:  ರಾಜ್ಯದ ಉಪಮುಖ್ಯಮಂತ್ರಿಯವರ ಆದೇಶದ ಮೇರೆಗೆ ಒಂಬತ್ತು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿಯನ್ನು ಪತ್ತೆ ಹಚ್ಚಿದರು.

ಜನಸೇನಾ ಪಕ್ಷದ ಸಂಸ್ಥಾಪಕ, ಡಿಸಿಎಂ ಪವನ್ ಕಲ್ಯಾಣ್ ಇತ್ತೀಚೆಗೆ ಆಂಧ್ರ ಪ್ರದೇಶದಲ್ಲಿ ಹೆಣ್ಣುಮಕ್ಕಳು ನಾಪತ್ತೆಯಾಗುತ್ತಿರುವ ಬಗ್ಗೆ ಹಲವು ಬಾರಿ ಆತಂಕ ವ್ಯಕ್ತಪಡಿಸಿದ್ದರು. ಸಾವಿರಾರು ಹೆಣ್ಣು ಮಕ್ಕಳು ಕಾಣೆಯಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ ಭೀಮಾವರಂನ ಶಿವಕುಮಾರಿ ಎಂಬ ಮಹಿಳೆ ತನ್ನ ಮಗಳು 9 ತಿಂಗಳಿಂದ ಕಾಣುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಕೆ ಮಾಡಿದ್ದರು.

ಘಟನೆ ಬೆನ್ನಲ್ಲೇ ಡಿಸಿಎಂ ಪವನ್ ಕಲ್ಯಾಣ್ ಈ ಪ್ರಕರಣವನ್ನು ಶೀಘ್ರ ಇತ್ಯರ್ಥಪಡಿಸುವಂತೆ ಆದೇಶಿಸಿದ್ದರು.

ಡಿಸಿಎಂ ಸೂಚನೆ ಬೆನ್ನಲ್ಲೇ ಪೊಲೀಸರು ತಮ್ಮದೇ ಶೈಲಿಯಲ್ಲೇ ತನಿಖೆ ಆರಂಭಿಸಿದ್ದರು. ಯುವತಿಯ ಫೋನ್ ಕರೆ ಡೇಟಾ ಆಧರಿಸಿ ಯುವತಿಯನ್ನು ಕೇವಲ 9 ದಿನದಲ್ಲಿ ಪೊಲೀಸರು ಪತ್ತೆ ಮಾಡಿದ್ದಾರೆ. ಆದರೆ ಯುವತಿಯ ತಾಯಿ ದೂರು ನೀಡಿದಾಗಲೇ ಸ್ಪಂದಿಸಿದ್ದರೆ ಪೊಲೀಸರಿಗೆ ಒಳ್ಳೆಯ ಹೆಸರು ಬರುತ್ತಿತ್ತು ಎಂಬ ಅಭಿಪ್ರಾಯ ಕೇಳಿ ಬಂದಿದೆ.

ಪೊಲೀಸ್ ತನಿಖೆಯಲ್ಲಿ ವಿಜಯವಾಡದ ರಾಮವರಪ್ಪಾಡು ಮೂಲದ ಯುವಕನೊಂದಿಗೆ ಯುವತಿ ಜಮ್ಮುವಿನಲ್ಲಿ ಇರುವುದು ಪತ್ತೆಯಾಗಿತ್ತು. ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ವಿಶೇಷ ತಂಡ ಜಮ್ಮುವಿನಿಂದ ಯುವತಿಯನ್ನು ವಿಜಯವಾಡಕ್ಕೆ ಕರೆತಂದಿದ್ದಾರೆ.

ಭೀಮಾವರಂನ ನಿವಾಸಿ 19 ವರ್ಷದ ಯುವತಿ ತನ್ನ ಚಿಕ್ಕಮ್ಮನ ಮನೆಯಲ್ಲಿ ವಾಸಿಸುತ್ತಾ ಯುನೈಟೆಡ್ ಹೋಟೆಲ್ ಮ್ಯಾನೇಜ್​ ಮೆಂಟ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಅದೇ ಕಾಲೇಜಿನಲ್ಲಿ ಹೊಟೇಲ್ ಮ್ಯಾನೇಜ್ ಮೆಂಟ್ ಕೋರ್ಸ್ ಓದುತ್ತಿರುವ ಅಂಜದ್ (ಶನ್ನು) ಆಕೆಯನ್ನು ಪ್ರೀತಿಯ ಹೆಸರಿನಲ್ಲಿ ಆಕೆಯನ್ನು ಕರೆದುಕೊಂಡು ಹೈದರಾಬಾದ್ ಎಸ್ಕೇಪ್ ಆಗಿದ್ದನಂತೆ. ಇತ್ತ ಕಾಲೇಜಿಗೆ ಹೋಗಿದ್ದ ಮಗಳು ಮನೆಗೆ ವಾಪಸ್ ಬಾರದ ಹಿನ್ನೆಲೆಯಲ್ಲಿ ತಾಯಿ ಕಳೆದ ವರ್ಷ ಅಕ್ಟೋಬರ್ ನಲ್ಲಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಿದ್ದಾರೆ.