Thursday, 19th September 2024

Tirupati : ತಿರುಪತಿ ದೇವಾಲಯ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ! ಸಿಎಂ ಚಂದ್ರಬಾಬು ನಾಯ್ಡು ಆರೋಪ

tirupati

ಹೈದರಾಬಾದ್​: ತಿರುಪತಿ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ (tirupati tirumala temple) ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಹಿಂದಿನ ವೈಎಸ್‌ಆರ್ ಕಾಂಗ್ರೆಸ್ (YSR Congress) ಸರ್ಕಾರ ಬಳಸುತ್ತಿತ್ತು ಎಂಬ ಗಂಭೀರ ಆರೋಪವನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Andhra Pradesh CM Chandrababu Naidu) ಮಾಡಿದ್ದಾರೆ.

ಬುಧವಾರ ನಡೆದ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ನಾಯ್ಡು, ಜೂನ್‌ನಲ್ಲಿ ತೆಲುಗು ದೇಶಂ ಪಕ್ಷ ಅಧಿಕಾರಕ್ಕೆ ಬರುವ ಮುನ್ನ ತಿರುಪತಿಯಲ್ಲಿ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿತ್ತು ಎಂದು ಹೇಳಿದರು.

ಕಳೆದ 5 ವರ್ಷಗಳಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕರು ತಿರುಮಲದ ಪಾವಿತ್ರ್ಯವನ್ನು ಹಾಳು ಮಾಡಿದ್ದಾರೆ. ಅವರು ‘ಅನ್ನದಾನ’ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿದ್ದಾರೆ. ಪವಿತ್ರ ತಿರುಮಲ ಲಡ್ಡು ತಯಾರಿಸಲು ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಿ ಕಲುಷಿತಗೊಳಿಸಿದ್ದಾರೆ. ಆದರೆ, ನಾವು ಈಗ ಶುದ್ಧ ತುಪ್ಪವನ್ನು ಬಳಸುತ್ತಿದ್ದೇವೆ. TTD ಯ ಪಾವಿತ್ರ್ಯತೆಯನ್ನು ಕಾಪಾಡಲು ಪ್ರಯತ್ನಿಸುತ್ತಿದ್ದೇವೆ ಎಂದರು.

ಆದರೆ ಇದನ್ನು ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಪಕ್ಷ ತಳ್ಳಿಹಾಕಿದೆ. ದುರುದ್ದೇಶಪೂರಿತವಾಗಿ ಈ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ವೈಎಸ್‌ಆರ್ ಕಾಂಗ್ರೆಸ್ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ವೈವಿ ಸುಬ್ಬಾ ರೆಡ್ಡಿ ಇದಕ್ಕೆ ಪ್ರತಿಕ್ರಿಯಿಸಿ, ಸಿಎಂ ನಾಯ್ಡು ಅವರು ತಿರುಮಲ ದೇಗುಲದ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ. “ಚಂದ್ರಬಾಬು ನಾಯ್ಡು ಅವರು ತಿರುಮಲದ ಪಾವಿತ್ರ್ಯತೆ ಮತ್ತು ಕೋಟ್ಯಂತರ ಹಿಂದೂಗಳ ನಂಬಿಕೆಯನ್ನು ಹಾಳು ಮಾಡಿದ್ದಾರೆ. ತಿರುಮಲ ಪ್ರಸಾದದ ಬಗ್ಗೆ ಅವರ ಕಾಮೆಂಟ್‌ಗಳು ದುರುದ್ದೇಶಪೂರಿತವಾಗಿವೆ. ಯಾವುದೇ ವ್ಯಕ್ತಿ ಇಂತಹ ಆರೋಪಗಳನ್ನು ಮಾಡುವುದಿಲ್ಲ” ಎಂದು ರೆಡ್ಡಿ Xನಲ್ಲಿ ಬರೆದಿದ್ದಾರೆ.

ರಾಜಕೀಯ ಲಾಭಕ್ಕಾಗಿ ಚಂದ್ರಬಾಬು ನಾಯ್ಡು ಯಾವ ಮಟ್ಟಕ್ಕೂ ಇಳಿಯುತ್ತಾರೆ ಎಂಬುದು ಮತ್ತೆ ಸಾಬೀತಾಗಿದೆ. ಭಕ್ತರ ನಂಬಿಕೆ ಗಟ್ಟಿಗೊಳಿಸಲು ನಾನು ಕುಟುಂಬ ಸಮೇತ ತಿರುಮಲ ಪ್ರಸಾದದ ವಿಚಾರವಾಗಿ ಪರಮಾತ್ಮನ ಮುಂದೆ ಪ್ರಮಾಣ ವಚನ ಸ್ವೀಕರಿಸಲು ಸಿದ್ಧ. ಚಂದ್ರಬಾಬು ನಾಯ್ಡು ತಮ್ಮ ಕುಟುಂಬದೊಂದಿಗೆ ಅದೇ ರೀತಿ ಮಾಡಲು ಸಿದ್ಧರಿದ್ದಾರೆಯೇ ಎಂದು ಸವಾಲು ಹಾಕಿದರು.

ತಿರುಪತಿ ಶ್ರೀ ವೆಂಕಟೇಶ್ವರ ದೇವಸ್ಥಾನವನ್ನು ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್‌ (ಟಿಟಿಡಿ) ನಿರ್ವಹಿಸುತ್ತದೆ. ಕರ್ನಾಟಕದಿಂದ ಪ್ರತಿವರ್ಷ ಇಲ್ಲಿಗೆ ಲಕ್ಷಾಂತರ ಮಂದಿ ಭೇಟಿ ನೀಡುತ್ತಾರೆ.

ಇದನ್ನೂ ಓದಿ: ತಿರುಪತಿಯಲ್ಲಿ ವಿಶ್ವದರ್ಜೆಯ ಆಯುರ್ವೇದ ವಿಶ್ವವಿದ್ಯಾಲಯ ಸ್ಥಾಪನೆ…!