Friday, 22nd November 2024

Anmol Boshnoi: ಅಮೆರಿಕದಲ್ಲಿ ತಲೆಮರೆಸಿಕೊಂಡಿರುವ ಲಾರೆನ್ಸ್‌ ಬಿಷ್ಣೋಯ್‌ ಸಹೋದರನಿಗೆ ಭಾರೀ ಸಂಕಷ್ಟ- ಶುರುವಾಯ್ತು ಹಸ್ತಾಂತರ ಪ್ರಕ್ರಿಯೆ

bishnoi gang

ನವದೆಹಲಿ: ನಟ ಸಲ್ಮಾನ್ ಖಾನ್(Salman Khan) ಅವರ ಮನೆಯ ಹೊರಗೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಬೇಕಾಗಿರುವ ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್‌(Lawrence Bishnoi)ಯ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್‌(Anmol Boshnoi)ನನ್ನು ಅಮೆರಿಕದಿಂದ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ(Extradition Process) ಶುರುವಾಗಿದೆ. ಅಮೆರಿಕದಿಂದ ಮರಳಿ ಕರೆತರಲು ಮುಂಬೈ ಪೊಲೀಸರ ಅಪರಾಧ ವಿಭಾಗವು ಹಸ್ತಾಂತರ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಪ್ರಕರಣಗಳ ವಿಶೇಷ ನ್ಯಾಯಾಲಯವು ಅನ್ಮೋಲ್ ಬಿಷ್ಣೋಯ್ ಬಂಧನಕ್ಕೆ ಜಾಮೀನು ರಹಿತ ವಾರಂಟ್ ಹೊರಡಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹಸ್ತಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನ್ಯಾಯಾಲಯದ ಕೆಲವು ದಾಖಲೆಗಳಿಗಾಗಿ ನಾವು ಕಾಯುತ್ತಿದ್ದೇವೆ. ನಂತರ ಮುಂದಿನ ಕ್ರಮಕ್ಕಾಗಿ ಔಪಚಾರಿಕ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಅವರು ಹೇಳಿದರು.

ವಿದೇಶದಲ್ಲಿ ಆತನ ಹುಡುಕಾಟಕ್ಕೆ ರೆಡ್ ಕಾರ್ನರ್ ನೋಟಿಸ್ ಕೂಡ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆತನ ಅಮೆರಿಕದಲ್ಲಿ ಇರುವ ಬಗ್ಗೆ ಮಾಹಿತಿ ಸಿಕ್ಕ ನಂತರ ಅಪರಾಧ ವಿಭಾಗವು ಹಸ್ತಾಂತರ ಪ್ರಕ್ರಿಯೆಯನ್ನು ಪ್ರಾರಂಭಿಸಿತು ಎಂದು ವರದಿಯಾಗಿದೆ. ಆರಂಭದಲ್ಲಿ ಆತ ಕೆನಡಾದಲ್ಲಿದ್ದಾರೆ ಎಂದು ನಂಬಲಾಗಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಕಳೆದ ತಿಂಗಳು ತನ್ನ ಮೋಸ್ಟ್ ವಾಂಟೆಡ್ ಅಪರಾಧಿ ಪಟ್ಟಿಗೆ ಅನ್ಮೋಲ್ ಬಿಷ್ಣೋಯ್‌ನನ್ನು ಸೇರಿಸಿತ್ತು. ಆತನ ಬಂಧನಕ್ಕೆ ₹ 10 ಲಕ್ಷ ಬಹುಮಾನವನ್ನೂ ಘೋಷಿಸಲಾಗಿತ್ತು.

2022 ರಲ್ಲಿ ಗಾಯಕ ಸಿಧು ಮೂಸೆವಾಲಾ ಹತ್ಯೆಯ ನಂತರ ಗಮನ ಸೆಳೆದ ಬಿಷ್ಣೋಯ್ ಗ್ಯಾಂಗ್ – ಏಪ್ರಿಲ್‌ನಲ್ಲಿ ಸಲ್ಮಾನ್ ಖಾನ್ ಅವರ ಬಾಂದ್ರಾ ಮನೆಯ ಹೊರಗೆ ನಡೆದ ಗುಂಡಿನ ದಾಳಿಯ ನಂತರ ಮತ್ತೆ ಸುದ್ದಿ ಮಾಡಿತ್ತು. 1998 ರ ಕೃಷ್ಣಮೃಗ ಬೇಟೆ ಪ್ರಕರಣದ ನಂತರ ಸಲ್ಮಾನ್‌ ಖಾನ್‌ಗೆ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಬೆದರಿಕೆಗಳು ಬರುತ್ತಲೇ ಇದ್ದುದರಿಂದ ಘಟನೆಯ ನಂತರ ಅವರ ಮನೆಗೆ ಭದ್ರತೆಯನ್ನು ಬಿಗಿಗೊಳಿಸಲಾಯಿತು.

ಲಾರೆನ್ಸ್ ಬಿಷ್ಣೋಯ್, ಅನ್ಮೋಲ್ ಬಿಷ್ಣೋಯ್ ಮತ್ತು ಕೆನಡಾ ಮೂಲದ ದರೋಡೆಕೋರ ಗೋಲ್ಡಿ ಬ್ರಾರ್ ಅವರನ್ನು ಗುಂಡಿನ ದಾಳಿ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಯಿತು. ಇನ್ನು ಕಳೆದ ತಿಂಗಳು ಸಲ್ಮಾನ್ ಖಾನ್ ಅವರ ನಿಕಟವರ್ತಿಯಾಗಿರುವ ರಾಜಕಾರಣಿ ಬಾಬಾ ಸಿದ್ದಿಕ್ ಅವರ ಹತ್ಯೆಯ ಹೊಣೆಯನ್ನೂ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದ್ದು, ಆ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: Salman Khan: ʻಸಲ್ಮಾನ್‌ ಖಾನ್‌ಗಿಂತ ಲಾರೆನ್ಸ್‌ ಬಿಷ್ಣೋಯ್‌ ಬೆಟರ್‌ʼ- ಮಾಜಿ ಪ್ರೇಯಸಿ ಬಿಚ್ಚಿಟ್ಳು ಭಾಯ್‌ಜಾನ್‌ ಕುರಿತ ಶಾಕಿಂಗ್‌ ಸಂಗತಿ