Friday, 27th September 2024

Anti Aging : ಮುಪ್ಪನ್ನು ಮುಂದೂಡಬೇಕೆ? ಎಣ್ಣೆಯ ಮೊರೆ ಹೋಗಿ!

Anti Aging

ಮುಪ್ಪನ್ನು ಮುಂದೂಡಲು ಮಾನವರು ಮಾಡುವ ಸಾಹಸಗಳಿಗೆ (Anti Aging ) ಮಿತಿ ಉಂಟೇ? ಮುಖ, ಕೂದಲುಗಳಿಗೆಲ್ಲ ನಳನಳಿಸುವಂತೆ ಬಣ್ಣ ಹಚ್ಚುತ್ತೇವೆ. ಮಂದವಾಗುವ ಎಲ್ಲಾ ಅಂಗಾಂಗಗಳನ್ನು ಚುರುಕು ಮಾಡುವ ತಂತ್ರಜ್ಞಾನವನ್ನು ಕಂಡುಕೊಂಡಿದ್ದೇವೆ. ಸುಕ್ಕಾಗುವ ಚರ್ಮಕ್ಕೊಂದು ಏನಾದರೂ ಇದ್ದಿದ್ದರೆ ಎಂದು ಕೈ ಹಿಸುಕಿಕೊಳ್ಳುತ್ತೇವೆ. ಮುಖದ ಚರ್ಮ ಸುಕ್ಕಾಗದಂತೆ ನೂರೆಂಟು ಉಪಾಯಗಳನ್ನು ಮಾಡುವ ನಮಗೆ, ಇಡೀ ದೇಹದ ಚರ್ಮಕ್ಕೆ ಅವನ್ನೆಲ್ಲ ಲೇಪಿಸುವುದು ದುಬಾರಿ ಎನಿಸಿಬಿಡುತ್ತದೆ. ಆದರೆ ಭಾರತದ ಪರಂಪರಾಗತ ಜೀವನಕ್ರಮದಲ್ಲಿ ಜರೆಯನ್ನು ಮುಂದೂಡುವುದಕ್ಕೂ ಉಪಾಯವಿದೆ ಎಂಬುದು ಗೊತ್ತೇ! ಏನದು?

ʻಅಭ್ಯಂಗಂ ಆಚರೇತ್‌ ನಿತ್ಯಂ ಸ ಜರಾಶ್ರಮ ವಾತಹಾ…ʼ ಎಂದು ಶ್ಲೋಕವೊಂದು ಹೇಳುತ್ತದೆ. ಅಂದರೆ ಅಭ್ಯಂಗವನ್ನು ನಿತ್ಯವೂ ಆಚರಿಸುವುದರಿಂದ ಮುಪ್ಪನ್ನು ಮುಂದೂಡಬಹುದು ಎನ್ನುವ ಅರ್ಥವಿಲ್ಲಿದೆ. ಮುಪ್ಪನ್ನು ತಡೆಯಲಂತೂ ಅಸಾಧ್ಯ. ಆದರೆ ಸರಿಯಾದ ಕ್ರಮದಲ್ಲಿ ಜೀವನವನ್ನು ಇರಿಸಿಕೊಂಡರೆ, ವಯಸ್ಸಾಗುವುದನ್ನು ಕೆಲಕಾಲ ಮುಂದೂಡಬಹುದು. ಅಂದರೆ ಕಾಲಕ್ರಮಣಿಕೆಯಲ್ಲಿ (ಕ್ರೊನೊಲಾಜಿಕಲ್) ಆಗುವ ಪ್ರಯಕ್ಕಿಂತ, ದೇಹದ ಕೋಶಗಳಿಗೆ‌ (ಬಯಲಾಜಿಕಲ್) ಆಗುವ ಪ್ರಾಯ ಭಿನ್ನವೇ ಆಗಿರಬಹುದು. ಹುಟ್ಟಿದಾಗಿನಿಂದ ಈವರೆಗಿನ ಪ್ರಾಯದ ಕಾಲಮಾನವನ್ನು ಬದಲಿಸಲು ಸಾಧ್ಯವಿಲ್ಲ. ಆದರೆ ದೇಹದ ಕೋಶಗಳಿಗೆ ಆಗುವ ಪ್ರಾಯದಲ್ಲಿ ವ್ಯತ್ಯಾಸ ಇರಬಹುದು.

ಯಾವ ತೈಲ ಸೂಕ್ತ?:

ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ, ಹರಳೆಣ್ಣೆಗಳನ್ನು ಇದಕ್ಕೆ ಬಳಸಬಹುದು. ಪುಟ್ಟ ಮಕ್ಕಳಿಗೆ ಬಾದಾಮಿ ಎಣ್ಣೆಯನ್ನೂ ಉಪಯೋಗಿಸಲಾಗುತ್ತದೆ. ಸಾಮಾನ್ಯವಾಗಿ ಅರ್ಧ ಎಳ್ಳೆಣ್ಣೆ, ಇನ್ನರ್ಧ ಕೊಬ್ಬರಿ ಎಣ್ಣೆಯನ್ನು ಬಳಸುವುದು ಎಲ್ಲಾ ಕಾಲದಲ್ಲಿಯೂ ಉತ್ತಮ. ಪ್ರತಿಯೊಂದು ತೈಲಕ್ಕೂ ಅದರದ್ದೇ ಆದ ಗುಣಧರ್ಮವಿದೆ. ಎಳ್ಳೆಣ್ಣೆಯು ಪ್ರಬಲವಾದ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಜೀವಕೋಶಗಳಿಗೆ ಮುಪ್ಪಡರುವುದನ್ನು ತಡೆಯಲು ಇದು ಉತ್ತಮ ಮಾರ್ಗವಾಗಿದೆ. ಕೊಬ್ಬರಿ ಎಣ್ಣೆಯು ದೇಹವನ್ನು ತಂಪಾಗಿಸುವ ಗುಣವನ್ನು ಹೊಂದಿದ್ದು, ವಾತಾವರಣದ ಉಷ್ಣತೆ ಹೆಚ್ಚಿರುವ ದಿನಗಳಲ್ಲಿ ಮತ್ತು ಸ್ಥಳಗಳಲ್ಲಿ ಇದನ್ನು ಅಭ್ಯಂಗಕ್ಕೆ ಹೆಚ್ಚು ಬಳಸಲಾಗುತ್ತದೆ. ಹರಳೆಣ್ಣೆಗೂ ದೇಹ ತಂಪಾಗಿಸುವ ಗುಣಗಳಿವೆ.

ಪುಟ್ಟ ಮಕ್ಕಳಿಗೆ ಎಣ್ಣೆ ಸ್ನಾನ ಮಾಡಿಸಲು ಕೊಬ್ಬರಿ ಎಣ್ಣೆ ಮಾತ್ರವಲ್ಲದೆ ಬಾದಾಮಿ ತೈಲವನ್ನೂ ಬಳಸಲಾಗುತ್ತದೆ. ಚರ್ಮದಾಳಕ್ಕೆ ಇಳಿದು, ತ್ವಚೆಯನ್ನು ಆಳದಿಂದಲೇ ಕಾಳಜಿ ಮಾಡುವ ಸಾಮರ್ಥ್ಯ ಇದರದ್ದು. ಚಳಿಗಾಲದ ದಿನಗಳಲ್ಲಿ ಎಳ್ಳೆಣ್ಣೆ ಮಾತ್ರವಲ್ಲ, ಕೆಲವು ಪ್ರದೇಶಗಳಲ್ಲಿ ಸಾಸಿವೆ ಎಣ್ಣೆಯನ್ನೂ ಅಭ್ಯಂಗಕ್ಕೆ ಬಳಸುವ ಕ್ರಮವಿದೆ. ಈ ಯಾವುದೇ ಎಣ್ಣೆಗಳನ್ನು ನೇರವಾಗಿ ಬಿಸಿ ಮಾಡದೆ, ಬಿಸಿ ನೀರಿನಲ್ಲಿ ಇಟ್ಟು ಬೆಚ್ಚಗೆ ಮಾಡಬೇಕು. ನಂತರ ಆ ತೈಲವನ್ನು ಎದೆ, ಹೊಟ್ಟೆ, ಬೆನ್ನು ಹಾಗೂ ಕೀಲಿನ ಭಾಗಗಳಿಗೆ ವೃತ್ತಾಕಾರದಲ್ಲಿ ತಿಕ್ಕಬೇಕು.

ಅಭ್ಯಂಜನದ ಲಾಭಗಳೇನು?:

ಶರೀರದ ಸುಸ್ತು ನಿವಾರಣೆ ಮಾಡಿ, ವಾತರೋಗಗಳನ್ನೂ ನಿಯಂತ್ರಣಕ್ಕೆ ತರುತ್ತದೆ ಅಭ್ಯಂಗ. ಕಣ್ತುಂಬಾ ನಿದ್ದೆ, ಚರ್ಮಕ್ಕೆ ಕಾಂತಿ, ಮನಸ್ಸಿಗೆ ಶಾಂತಿ, ದೇಹಕ್ಕೆ ಬಲ, ದೃಷ್ಟಿಗೆ ರಕ್ಷಣೆ, ಒತ್ತಡ ನಿವಾರಣೆ, ಸಂಧಿವಾತದಿಂದ ಮುಕ್ತಿ, ಮನೋಲ್ಲಾಸ- ಇವೆಲ್ಲದರ ಫಲವಾಗಿ ದೀರ್ಘಾಯಸ್ಸು. ಜೊತೆಗೆ ದೇಹದೆಲ್ಲೆಡೆ ರಕ್ತ ಸಂಚಾರವೂ ಹೆಚ್ಚಿ, ಅಂಗಾಂಗಗಳ ಕ್ಷಮತೆ ವೃದ್ಧಿಸುತ್ತದೆ. ಎಣ್ಣೆ ಸ್ನಾನಕ್ಕೆ ಇದಕ್ಕಿಂತ ಬೇರೆ ಲಾಭ ಬೇಕೆ?

ದೃಷ್ಟಿ ಚುರುಕು

ದಿನದ ಹೆಚ್ಚಿನ ಹೊತ್ತು ಸ್ಕ್ರೀನ್‌ ನೋಡುವುದರಿಂದ ಕಣ್ಣುಗಳ ಸಹಜವಾಗಿ ಹೆಚ್ಚು ಆಯಾಸಗೊಳ್ಳುತ್ತವೆ. ಹಾಗಾಗಿ ತಲೆ ತಂಪಾಗುವಂತೆ ಎಣ್ಣೆ ಮಸಾಜ್‌ ಮಾಡುವುದರಿಂದ, ತಲೆ, ಕಣ್ಣಿನ ನರಗಳ ಆಯಾಸವೆಲ್ಲಾ ಶಮನವಾಗುತ್ತದೆ. ದೃಷ್ಟಿ ಚುರುಕಾಗುತ್ತದೆ. ಇಡೀ ದೇಹದ ಒತ್ತಡ ನಿವಾರಣೆಯಲ್ಲಿ ಇದರ ಪಾತ್ರವೂ ಮಹತ್ವದ್ದು.

ಇದನ್ನೂ ಓದಿ: Travel Tips: ನಿಮ್ಮ ಮುದ್ದಿನ ಸಾಕುಪ್ರಾಣಿಗಳೊಂದಿಗೆ ಪ್ರವಾಸಕ್ಕೆ ಹೋಗಲು ಬಯಸುವಿರಾ? ಈ ಸ್ಥಳಗಳಿಗೆ ಭೇಟಿ ನೀಡಿ!

ಕಣ್ತುಂಬಾ ನಿದ್ದೆ

ನಿದ್ರಾಹೀನತೆಯಲ್ಲಿ ಒತ್ತಡದ್ದೇ ಮುಖ್ಯ ಭೂಮಿಕೆ. ಒತ್ತಡ ನಿವಾರಣೆ ಆಗುತ್ತಿದ್ದಂತೆ ನಿದ್ದೆಯೂ ಸುಲಲಿತವಾಗುತ್ತದೆ. ಅದರಲ್ಲೂ, ಎಣ್ಣೆ- ಬಿಸಿನೀರಿನ ಸ್ನಾನವು ನಿದ್ದೆಯನ್ನು ಉದ್ದೀಪಿಸುತ್ತವೆ. ಹಾಗಾಗಿ ನಿದ್ರಾಹೀನತೆಯ ಸಮಸ್ಯೆ ಇದ್ದವರು ಪದೇಪದೆ ಅಭ್ಯಂಗ ಮಾಡುವುದು ಒಳ್ಳೆಯ ಪರಿಹಾರ ಆಗಬಲ್ಲದು. ಮನಸ್ಸಿನ ಒತ್ತಡ ನಿರ್ವಹಣೆಗೆ ಇದು ಒಳ್ಳೆಯ ಮದ್ದು. ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯತೆ ಗಳಿಸಿರುವ ಸ್ಪಾ ಮಸಾಜ್‌ನಂಥವು ಸಹ ಇದೇ ರೀತಿಯ ತತ್ವಗಳನ್ನು ಬಳಸುತ್ತವೆ. ನವಿರಾದ ಎಣ್ಣೆ ಮಸಾಜ್‌ ಮತ್ತು ಹದವಾದ ಬಿಸಿ ನೀರ ಸ್ನಾನವು ಸಾಧಾರಣ ಎಂಥಾ ಒತ್ತಡವನ್ನೂ ಶಮನ ಮಾಡಬಲ್ಲದು.