Wednesday, 25th September 2024

Antyodaya Diwas 2024: ಇಂದು ಅಂತ್ಯೋದಯ ದಿನಾಚರಣೆ; ಈ ದಿನದ ವಿಶೇಷ ಏನು?

Antyodaya Divas 2024

ಭಾರತೀಯ ಜನಸಂಘದ (BJS) ಸಹ ಸಂಸ್ಥಾಪಕ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಚಿಂತಕರಾಗಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮ ದಿನವನ್ನು (Antyodaya Diwas 2024) ದೇಶದಲ್ಲಿ (india) ವಾರ್ಷಿಕವಾಗಿ ಅಂತ್ಯೋದಯ ದಿವಸ್ ಎಂದು ಆಚರಿಸಲಾಗುತ್ತದೆ.

ಭಾರತದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ ಉಪಾಧ್ಯಾಯ (Pandit Deendayal Upadhyaya) ಅವರು, ಬಡವರು ಮತ್ತು ಮಧ್ಯಮ ವರ್ಗದ ಜನ ಜೀವನವನ್ನು ಸುಧಾರಿಸಲು ಅನೇಕ ಪ್ರಯತ್ನಗಳನ್ನು ನಡೆಸಿದ್ದಾರೆ. ಹೀಗಾಗಿ ಅವರ ಜನ್ಮ ದಿನವನ್ನು ಅಂತ್ಯೋದಯ ದಿನವಾಗಿ ಆಚರಿಸಲಾಗುತ್ತದೆ.

ಉಪಾಧ್ಯಾಯ ಅವರ ಜೀವನ

ದೀನ್ ದಯಾಳರು ಉತ್ತರಪ್ರದೇಶದ ಮಥುರಾ ಜಿಲ್ಲೆಯ ನಗ್ಲಾ ಚಂದ್ರಬಾನ್ ಎನ್ನುವ ಹಳ್ಳಿಯಲ್ಲಿ 1916ರ ಸೆಪ್ಟೆಂಬರ್ 25ರಂದು ಜನಿಸಿದರು. ಇವರ ತಂದೆ ವಿದ್ವಾಂಸರು ಹಾಗೂ ಜ್ಯೋತಿಷರಾಗಿದ್ದ ಭಗವತೀಪ್ರಸಾದ್ ಉಪಾಧ್ಯಾಯರು. ತಾಯಿ ರಾಮ್ ಪ್ಯಾರಿ. ಎಂಟು ವರ್ಷದಲ್ಲೇ ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾದ ಉಪಾಧ್ಯಾಯರು ಸೋದರ ಮಾವನ ಸಹಾಯದಿಂದ ವಿದ್ಯಾಭ್ಯಾಸವನ್ನು ಮುಂದುವರಿಸಿದರು.

ರಾಜಸ್ಥಾನದ ಪಿಲಾನಿಯಲ್ಲಿ ತಮ್ಮ ಪ್ರೌಢಶಿಕ್ಷಣವನ್ನು ಪೂರ್ಣಗೊಳಿಸಿ ಕಾನ್ಪುರದ ಸನಾತನ ಧರ್ಮ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಸ್ನಾತಕ ಪದವಿಯನ್ನು ಹಾಗೂ ಆಗ್ರಾದ ಸೈಂಟ್ ಜೋನ್ಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಪಡೆದರು.

ರಾಜಕೀಯದಲ್ಲಿ ಸಕ್ರಿಯರಾಗಿದ್ದ ದೀನ್ ದಯಾಳ್ ಉಪಾಧ್ಯಾಯ ಅವರು ವ್ಯಕ್ತಿ ವ್ಯಕ್ತಿಗಳ ಸಮೂಹವೇ ಪರಿವಾರ, ಪರಿವಾರಗಳ ಸಮೂಹವೇ ಸಮಾಜ, ಸಮಾಜಗಳ ಸಮೂಹವೇ ರಾಷ್ಟ್ರ, ರಾಷ್ಟ್ರಗಳ ಸಮೂಹವೇ ವಿಶ್ವ.. ಎಂದಿದ್ದರು. ಇವೆಲ್ಲವೂ ಒಂದಕ್ಕೊಂದು ಪೂರಕವಾಗಿರಬೇಕು ಎಂದು ವಾದಿಸಿದರು.

ಅಂತ್ಯೋದಯ ದಿವಸ್ ಆಚರಣೆ

ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮ ದಿನವಾದ ಸೆಪ್ಟೆಂಬರ್ 25ರಂದು ಪ್ರತಿ ವರ್ಷ ಅಂತ್ಯೋದಯ ದಿವಸ್ ಅನ್ನು ದೇಶಾದ್ಯಂತ ಆಚರಿಸಲಾಗುತ್ತದೆ.

ಉಪಾಧ್ಯಾಯರ ಹೆಸರಿನಲ್ಲಿ ವಿವಿಧ ಕಾರ್ಯಕ್ರಮ

1916ರ ಸೆಪ್ಟೆಂಬರ್ 25ರಂದು ಮಥುರಾದಲ್ಲಿ ಜನಿಸಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರು 1968ರಲ್ಲಿ ಮೊಘಲ್ಸರಾಯ್ ಜಂಕ್ಷನ್ ರೈಲು ನಿಲ್ದಾಣದ ಬಳಿ ನಿಧನರಾದರು. ಅವರ ಜನ್ಮದಿನವನ್ನು ಪ್ರಧಾನಿ ನರೇಂದ್ರ ಮೋದಿ ಅವರು 2014 ರಲ್ಲಿ ರಾಷ್ಟ್ರೀಯ ರಜಾದಿನವೆಂದು ಘೋಷಿಸಿದರು.

Antyodaya Divas 2024

ಉತ್ತರ ಪ್ರದೇಶ ಸರ್ಕಾರವು ಮೊಘಲ್ಸರಾಯ್ ಜಂಕ್ಷನ್ ರೈಲು ನಿಲ್ದಾಣದ ಹೆಸರನ್ನು 2018ರಲ್ಲಿ ‘ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್’ ಎಂದು ಬದಲಾಯಿಸಿದೆ.

2014ರಲ್ಲಿ ಸೆಪ್ಟೆಂಬರ್ 25ರಂದು ಗ್ರಾಮೀಣಾಭಿವೃದ್ಧಿ ಸಚಿವಾಲಯವು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (NRLM) ಅಡಿಯಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವಾದ ಆಜೀವಿಕ ಕೌಶಲ್ಯಗಳನ್ನು ಮರು ಪರಿಚಯಿಸಿತು. ಅನಂತರ ಇದನ್ನು 2015ರ ನವೆಂಬರ್ ನ ಲ್ಲಿ ದೀನದಯಾಳ್ ಅಂತ್ಯೋದಯ ಯೋಜನೆ (NRLM) ಎಂದು ಮರುನಾಮಕರಣ ಮಾಡಲಾಯಿತು.

Antyodaya Divas 2024

ಅಂತ್ಯೋದಯ ದಿವಸ್‌ನ ಮಹತ್ವ

ಸರ್ಕಾರದ ವಿವಿಧ ಯೋಜನೆಗಳು ಎಲ್ಲರನ್ನೂ ತಲುಪಬೇಕು ಎನ್ನುವುದು ಅಂತ್ಯೋದಯ ಮಿಷನ್‌ನ ಧ್ಯೇಯವಾಗಿದೆ. ಇದಕ್ಕೆ ಅನುಗುಣವಾಗಿ ಭಾರತದ ಎಲ್ಲಾ ಹಿಂದುಳಿದ ಮತ್ತು ಗ್ರಾಮೀಣ ಯುವಕರಿಗೆ ಸ್ಥಳೀಯ, ರಾಷ್ಟ್ರೀಯ ಮತ್ತು ಜಾಗತಿಕ ಉದ್ಯೋಗಾವಕಾಶಗಳನ್ನು ಹುಡುಕಲು ಸಹಾಯ ಮಾಡುವುದು ಅಂತ್ಯೋದಯ ದಿವಸ್‌ನ ಆಚರಣೆಯ ವಿಶೇಷತೆಯಾಗಿದೆ.

Yogi Adityanath : ಬಾಣಸಿಗರಿಗೆ ಮಾಸ್ಕ್‌, ಗ್ಲವ್ಸ್‌ ಕಡ್ಡಾಯಗೊಳಿಸಿದ ಯೋಗಿ

ಸಮಾಜದ ಹಿಂದುಳಿದ ಮತ್ತು ದುರ್ಬಲ ವರ್ಗದ ಜನರ ರಕ್ಷಣೆ ಮತ್ತು ಕಾಳಜಿ ವಹಿಸುವ ಅಗತ್ಯತೆ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರವು ವಿವಿಧ ವಿಚಾರ ಸಂಕಿರಣಗಳು, ರಕ್ತದಾನ ಶಿಬಿರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಈ ವಿಶೇಷ ದಿನದಂದು, ಮೂಲಭೂತ ಅವಶ್ಯಕತೆಗಳ ಕೊರತೆಯಿರುವ ಜನರಿಗೆ ಸಹಾಯ ಮಾಡಲು ಸರ್ಕಾರವು ದೇಶಾದ್ಯಂತ ಅನೇಕ ಚಟುವಟಿಕೆಗಳನ್ನು ನಡೆಸುತ್ತದೆ.