Saturday, 14th December 2024

ಚು.ಆಯೋಗದ ನೂತನ ಆಯುಕ್ತರಾಗಿ ಅನೂಪ್ ಚಂದ್ರ ಪಾಂಡೆ ನೇಮಕ

ನವದೆಹಲಿ: ಚುನಾವಣಾ ಆಯೋಗದ ನೂತನ ಆಯುಕ್ತರನ್ನಾಗಿ ಉತ್ತರ ಪ್ರದೇಶದ ಮಾಜಿ ಮುಖ್ಯ ಕಾರ್ಯದರ್ಶಿ ಅನೂಪ್ ಚಂದ್ರ ಪಾಂಡೆ ರನ್ನು ನೇಮಿಸಿ ಆದೇಶಿಸಲಾಗಿದೆ.

ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿದ್ದ ಸುನಿಲ್ ಅರೋರಾ ಅವರು ಏಪ್ರಿಲ್ 12ರಂದು ನಿವೃತ್ತರಾಗಿದ್ದರು. ಆ ಸ್ಥಾನಕ್ಕೆ ಉತ್ತರ ಪ್ರದೇಶ ಕೇಡರ್‌ನ ನಿವೃತ್ತ ಐಎಎಸ್ ಅಧಿಕಾರಿ ಅನೂಪ್ ಚಂದ್ ಪಾಂಡೆ ಅವರನ್ನು ನೇಮಿಸಲಾಗಿದೆ.

ಮೂರು ಸದಸ್ಯರ ಆಯೋಗದಲ್ಲಿ ಸುಶೀಲ್ ಚಂದ್ರ ಹಾಗೂ ರಾಜೀವ್ ಕುಮಾರ್ ಅವರು ಕಾರ್ಯ ನಿರ್ವಹಿಸುತ್ತಿದ್ದು, ಇನ್ನೊಬ್ಬ ಆಯುಕ್ತರ ಹುದ್ದೆ ಖಾಲಿ ಉಳಿದಿತ್ತು.

ಉತ್ತರ ಪ್ರದೇಶ ಕೇಡರ್‌ನ 1984ನೇ ಬ್ಯಾಚ್ ಐಎಎಸ್ ಅಧಿಕಾರಿ ಅನೂಪ್ ಚಂದ್ರ ಪಾಂಡೆ ಈ ಹಿಂದೆ ಭಾರತೀಯ ರಕ್ಷಣಾ ಇಲಾಖೆಯಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಹಾಗೂ ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಉತ್ತರ ಪ್ರದೇಶದಲ್ಲಿ ವಿವಿಧ ಸರ್ಕಾರಿ ಹುದ್ದೆ ನಿಭಾಯಿಸಿದ್ದರು.