ಮುಂಬೈ: ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಒಬ್ಬ ಅತ್ಯದ್ಬುತ ನಟ ಎನ್ನುವುದಕ್ಕೆ ಯಾವುದೇ ಸಂಶಯವಿಲ್ಲ. ಇದೀಗ ವಂಚಕರು ನಕಲಿ ನೋಟುಗಳ ಮೇಲೆ ಅನುಪಮ್ ಖೇರ್(Anupam Kher) ಅವರ ಚಿತ್ರವನ್ನು ಪ್ರಿಂಟ್ ಮಾಡುವ ಮೂಲಕ ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿದೆ. ಅಷ್ಟೇ ಅಲ್ಲದೇ ಆ ನೋಟುಗಳನ್ನು ಬಳಸಿಕೊಂಡು ಕಿಡಿಗೇಡಿಗಳು ಚಿನ್ನದ ಉದ್ಯಮಿಗೆ ಪಂಗನಾಮ ಹಾಕಿರುವ ಘಟನೆ ವರದಿಯಾಗಿದೆ. ಇನ್ನು ಈ ₹ 500 ಮುಖಬೆಲೆಯ ನಕಲಿ ನೋಟುಗಳ ಫೊಟೋ ಎಲ್ಲೆಡೆ ವೈರಲ್ ಆಗುತ್ತಿದೆ.
ಏನಿದು ಘಟನೆ?
ಗುಜರಾತ್‌ನ ಅಹಮದಾಬಾದ್‌ನಲ್ಲಿಈ ಘಟನೆ ನಡೆದಿದ್ದು, 1.6 ಕೋಟಿ ರೂ. ಮೌಲ್ಯದ ₹ 500 ಮುಖಬೆಲೆಯ ನೋಟುಗಳ ಮೇಲೆ ಮಹಾತ್ಮ ಗಾಂಧೀಜಿಯವ ಚಿತ್ರದ ಬದಲು ಬಾಲಿವುಡ್ ನಟ ಅನುಪಮ್ ಖೇರ್ ಅವರ ಚಿತ್ರ ಪ್ರಿಂಟ್ ಮಾಡಲಾಗಿದೆ. ಮತ್ತೊಂದು ಅಸಕ್ತಿಕರ ಸಂಗತಿ ಏನೆಂದರೆ ನೋಟುಗಳ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಬದಲು ರೆಸೋಲ್ ಬ್ಯಾಂಕ್ ಆಫ್ ಇಂಡಿಯಾ ಎಂದು ಮುದ್ರಿಸಲಾಗಿದೆ.
ಅಹಮದಾಬಾದ್‌ನ ಮಾಣಿಕ್ ಚೌಕ್‌ನ ಚಿನ್ನದ ವ್ಯಾಪಾರಿ ಮೆಹುಲ್ ಠಕ್ಕರ್ ಅವರ ಬಳಿ ಎರಡು ಕೆಜಿ ಚಿನ್ನ ಖರೀದಿಗೆ ಖತರ್ನಾಕ್ ಕಳ್ಳರಿಬ್ಬರು 1.60 ಕೋಟಿಗೆ ಒಪ್ಪಂದ ಮಾಡಿಕೊಂಡಿದ್ದರು. ಅದ್ರಂತೆ ಮೊದಲ ಕಂತಿನಲ್ಲಿ 1.30 ಕೋಟಿ ಎರಡನೇ ಕಂತಿನಲ್ಲಿ 30 ಲಕ್ಷ ಕೊಡುವುದಾಗಿ ಹೇಳಿದ್ದರು. ಆ ನಂತರ ಕೊಟ್ಟಿರುವ ಮಾತಿನಂತೆ 1.30 ಕೋಟಿ ಹಣ ನೀಡಲು ಬ್ಯಾಗ್ ಸಮೇತ ಬಂದಿದ್ದರು. ಅ ಬ್ಯಾಗ್‌ನಲ್ಲಿ ಈ ನಕಲಿ ನೋಟುಗಳನ್ನೇ ತುಂಬಿದ್ದರು.
ಹೀಗೆ ಹಣ ಸಿಕ್ಕ ಖುಷಿಯಲ್ಲಿ ಯಂತ್ರದ ಸಹಾಯದಿಂದ ಹಣ ಎಣಿಸಲು ಮೆಹುಲ್ ಠಕ್ಕರ್ ಮತ್ತು ಅಂಗಡಿಯಲ್ಲಿ ಕೆಲಸ ಮಾಡುವ ಉದ್ಯೋಗಿ ಭರತ್ ಜೋಶಿ ಮುಂದಾಗಿದ್ದಾರೆ. 26 ಕಟ್ಟುಗಳಿದ್ದ 500 ರೂಪಾಯಿಯಲ್ಲಿ ಮಹಾತ್ಮಾ ಗಾಂಧೀಜಿಯ ಬದಲು ಅನುಪಮ್ ಖೇರ್ ಫೋಟೋ ಕಂಡು ಬೆಚ್ಚಿ ಬಿದ್ದಿದ್ದಾರೆ. ಅಹಮದಾಬಾದ್‌ನ ನವರಂಗ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೆಪ್ಟೆಂಬರ್ 24ರಂದು ಈ ವಂಚನೆ ನಡೆದಿದ್ದು ಸದ್ಯ ಮೆಹುಲ್ ಠಕ್ಕರ್ ಅವರ ಅಂಗಡಿಯ ಬಳಿ ಇರುವ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಇಬ್ಬರು ಆರೋಪಿಗಳನ್ನು ಗುರುತಿಸಿದ್ದಾರೆ. ಬಂಧನಕ್ಕೆ ಬೆಲೆ ಬೀಸಿದ್ದಾರೆ.
ಅನುಪಮ್ ಖೇರ್ ರಿಯಾಕ್ಟ್
ಇನ್ನು ಈ ನಕಲಿ ನೋಟುಗಳ ಚಿತ್ರ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಸ್ವತಃ ಅನುಪಮ್ ಖೇರ್ ಪ್ರತಿಕ್ರಿಯಿಸಿದ್ದಾರೆ. ಈ ನೋಟುಗಳನ್ನು ಕಂಡು ಅವರು ಅಚ್ಚರಿಗೊಂಡಿದ್ದು, ಐನೂರರ ನೋಟಿನಲ್ಲಿ ಗಾಂಧಿ ಫೋಟೋ ಬದಲು ನನ್ನ ಫೋಟೋ???? ಏನು ಬೇಕಾದರೂ ಆಗಬಹುದು ಎಂದು ಬರೆದುಕೊಂಡಿದ್ದಾರೆ. ಸದ್ಯ ನೆಟ್ಟಿಗರ ಟ್ರೋಲ್‌ಗೆ ಈ ವಿಚಾರ ಆಹಾರವಾಗಿದೆ.
ಈ ಸುದ್ದಿಯನ್ನೂ ಓದಿ: Viral Video: ಸರ್ಕಾರಿ ಶಾಲೆಯಲ್ಲಿ ನಡೆಯಿತು ಕುಡಿತ, ಕುಣಿತ; ವಿಡಿಯೊ ವೈರಲ್