Friday, 20th September 2024

ಡಿಜಿಟಲ್ ಮಾಧ್ಯಮಗಳ ನಿಯಂತ್ರಣಕ್ಕೆ ಹೊಸ ಕಾನೂನು: ಅನುರಾಗ್ ಠಾಕೂರ್

ಜೈಪುರ್: ದೇಶದಲ್ಲಿನ ಡಿಜಿಟಲ್ ಮಾಧ್ಯಮಗಳ ನೋಂದಣಿ, ಕಾರ್ಯನಿರ್ವಹಣೆ ಹಾಗೂ ನಿಯಂತ್ರಣದ ಬಗ್ಗೆ ಹೊಸ ಕಾನೂನನ್ನು ಕೇಂದ್ರ ಸರ್ಕಾರ ಶೀಘ್ರದಲ್ಲಿ ಜಾರಿಗೆ ತರಲಿದೆ’ ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಹಿಂದೆ ಸುದ್ದಿಗಳ ಏಕಮುಖ ಸಂವಹನವಿತ್ತು, ವಿದ್ಯುನ್ಮಾನ ಮತ್ತು ಡಿಜಿಟಲ್ ಮಾಧ್ಯಮ ಗಳ ಬೆಳವಣಿಗೆಯೊಂದಿಗೆ, ಸುದ್ದಿ ಸಂವಹನವು ಬಹು ಆಯಾಮವಾಗಿದೆ ಎಂದು ಹೇಳಿದರು.  ‘ಸದ್ಯ ದೇಶದಲ್ಲಿ ಡಿಜಿಟಲ್ ಮಾಧ್ಯಮಕ್ಕೆ ಉತ್ತಮ ಭವಿಷ್ಯವಿದೆ ಹಾಗೂ ಸವಾಲುಗಳು ಕೂಡ ಇವೆ. ಬದಲಾವಣೆಗಳನ್ನು ಕಾನೂನಿನಲ್ಲಿ ತರಬೇಕು ಮತ್ತು ನಿಮ್ಮ ಕೆಲಸವನ್ನು ಸರಳಗೊಳಿಸಲು ನಾವು ಅದನ್ನು ತರುತ್ತೇವೆ ಎಂದಿದ್ದಾರೆ.

‘ವಿಶೇಷವಾಗಿ ಡಿಜಿಟಲ್ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ ಪತ್ರಕರ್ತ ರಿಗೆ ಕೇಂದ್ರ ಸರ್ಕಾರದಿಂದ ಮಾನ್ಯತೆ ನೀಡುವ ಬಗ್ಗೆ ಚಿಂತಿಸಲಾಗುತ್ತಿದೆ.  ‘ಇನ್ನು ಮುಂದೆ ಪತ್ರಿಕೆಗಳ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗುವುದು. ಕೇಂದ್ರ ಸರ್ಕಾರವು ಪ್ರೆಸ್ ಮತ್ತು ರಿಜಿಸ್ಟ್ರೇಶನ್ ಕಾಯ್ದೆ 1867ರ ಬದಲಿಗೆ ಹೊಸ ಕಾನೂನನ್ನು ಶೀಘ್ರದಲ್ಲೇ ಜಾರಿಗೆ ತರಲಿದೆ.

ಪತ್ರಿಕೆಗಳು ಸರಿಯಾದ ಸುದ್ದಿಗಳನ್ನು ಜನಸಾಮಾನ್ಯರ ಮುಂದೆ ಸರಿಯಾದ ಸಮಯದಲ್ಲಿ ತೆರೆದಿಡಬೇಕು. ಸರ್ಕಾರದ ಲೋಪ ದೋಷಗಳ ಜತೆಗೆ ಸರ್ಕಾರದ ಜನಕಲ್ಯಾಣ ಯೋಜನೆಗಳು, ನೀತಿಗಳು ಸಹ ಜನಸಾಮಾನ್ಯರಿಗೆ ತಲುಪಬೇಕು ಎಂದು ಕಿವಿಮಾತು ಹೇಳಿದರು.