Thursday, 21st November 2024

APAAR ID Card: ವಿದ್ಯಾರ್ಥಿಗಳಿಗೆ ‘ಆಧಾರ್’ ಮಾದರಿಯಲ್ಲಿ ‘ಅಪಾರ್’ ವಿಶಿಷ್ಟ ಗುರುತಿನ ಚೀಟಿ

APAAR ID Card

ಬೆಂಗಳೂರು: ವಿದ್ಯಾರ್ಥಿಗಳಿಗೆ (Students) ಆಧಾರ್ (Aadhar) ಸಂಖ್ಯೆಯ ಮಾದರಿಯಲ್ಲಿ 12 ಅಂಕಿಯ ಅಪಾರ್ ವಿಶಿಷ್ಟ ಗುರುತಿನ ಚೀಟಿ (APAAR ID Card) ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಶಾಲಾ ಶಿಕ್ಷಣ ಸಚಿವಾಲಯದ ರಾಷ್ಟ್ರೀಯ ಶಿಕ್ಷಣ ನೀತಿ ಯೋಜನೆಯಡಿ ವಿದ್ಯಾರ್ಥಿಗಳಿಗೆ ದೇಶಾದ್ಯಂತ ಏಕರೂಪದ ಗುರುತಿನ ಚೀಟಿ ನೀಡಲು ‘ಒಂದು ದೇಶ ಏಕರೂಪದ ವಿದ್ಯಾರ್ಥಿ ಗುರುತಿನ ಚೀಟಿ’ ಶಿಫಾರಸು ಮಾಡಿದ್ದು, ಅಂತೆಯೇ ಎಲ್ಲ ವಿದ್ಯಾರ್ಥಿಗಳಿಗೆ ಅಪಾರ್ ವಿಶಿಷ್ಟ ಗುರುತಿನ ಚೀಟಿ ನೀಡಲಾಗುತ್ತಿದೆ.

ರಾಜ್ಯದ ಎಲ್ಲಾ ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳಿಗೆ ಆಧಾರ್ ಸಂಖ್ಯೆ ಮಾದರಿಯ ವಿಶಿಷ್ಟ ಗುರುತಿನ ಚೀಟಿ ವಿತರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಶಿಕ್ಷಣದ ಸಮಗ್ರ ಮಾಹಿತಿ ಹೊಂದಿರುವ ವ್ಯವಸ್ಥೆಯಡಿ ಮಕ್ಕಳಿಗೂ ವಿಶಿಷ್ಟ ಗುರುತಿನ ಸಂಖ್ಯೆಯ ಗುರುತಿನ ಚೀಟಿಯನ್ನು ನೀಡಲಾಗುವುದು.

ರಾಜ್ಯ ಪಠ್ಯಕ್ರಮದ ಶಾಲೆಗಳ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ಸ್ಟೂಡೆಂಟ್ ಟ್ರ್ಯಾಕಿಂಗ್ ಸಿಸ್ಟಮ್-ಎಟಿಎಸ್ ಗುರುತಿನ ಚೀಟಿ, ಕೇಂದ್ರ ಸರ್ಕಾರದ ಪರ್ಮನೆಂಟ್ ಎಜುಕೇಶನ್ ನಂಬರ್-ಪಿಇಎನ್ ಚಾಲ್ತಿಯಲ್ಲಿ ಇವೆ. ಅಪಾರ್ ಗುರುತಿನ ಚೀಟಿಗೆ ವಿದ್ಯಾರ್ಥಿಗಳ ಹೆಸರು ನೋಂದಣಿಗೆ ಮೊದಲು ಪೋಷಕರ ಒಪ್ಪಿಗೆ ಕಡ್ಡಾಯವಾಗಿರುತ್ತದೆ. ಪೋಷಕರ ಆಧಾರ್, ಚುನಾವಣಾ ಆಯೋಗ ನೀಡಿದ ಮತದಾರರ ಗುರುತಿನ ಚೀಟಿ, ಡಿಎಲ್ ಜೋಡಿಸಿ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ಸೃಷ್ಟಿಸಲಾಗುವುದು.

ವಿದ್ಯಾರ್ಥಿಗಳ ಹೆಸರು ನೋಂದಣಿಗೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಸ್ವಯಂ ಚಾಲಿತ ಶಾಶ್ವತ ಶೈಕ್ಷಣಿಕ ಖಾತೆ ನೋಂದಣಿ ‘ಅಪಾರ್’ ಸಂಕ್ಷಿಪ್ತ ರೂಪವಾಗಿದ್ದು, ಆಧಾರ್ ಕಾರ್ಡ್ ಮಾದರಿಯಲ್ಲಿ ಇದನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ಇದು ವಿದ್ಯಾರ್ಥಿಯ ಜೀವಮಾನದ ಗುರುತಿನ ಸಂಖ್ಯೆಯಾಗಿರುತ್ತದೆ. ಇದರಲ್ಲಿ ವಿದ್ಯಾರ್ಥಿಯ ಎಲ್ಲಾ ಶೈಕ್ಷಣಿಕ ಮಾಹಿತಿ ದಾಖಲಾಗಿರುತ್ತದೆ. ಪೂರ್ವ ಪ್ರಾಥಮಿಕ ಶಾಲೆಯಿಂದ ಉನ್ನತ ಶಿಕ್ಷಣದವರೆಗೆ ಪ್ರತಿ ವಿದ್ಯಾರ್ಥಿಗಳಿಗೆ ಈ ಕಾರ್ಡ್ ವಿತರಿಸಲಿದ್ದು, ಹೆಸರು, ವಿಳಾಸ, ಜನ್ಮದಿನ, ಭಾವಚಿತ್ರ ಸೇರಿ ಎಲ್ಲ ಮಾಹಿತಿ ಡಿಜಿಟಲ್ ರೂಪದಲ್ಲಿರಲಿದ್ದು, ಶೈಕ್ಷಣಿಕ ಉದ್ದೇಶಕ್ಕೆ ಮಾತ್ರ ಇದನ್ನು ಬಳಕೆ ಮಾಡಲಾಗುವುದು ಎಂದು ಹೇಳಲಾಗಿದೆ.