Saturday, 26th October 2024

Army Accident : ಜಮ್ಮು- ಕಾಶ್ಮೀರದಲ್ಲಿ ಸೇನಾ ವಾಹನ ಅಪಘಾತ; ಯೋಧ ಸಾವು, 13 ಮಂದಿಗೆ ಗಾಯ

Army Accident

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಸೇನಾ ವಾಹನವು (Army Accident) ಪಲ್ಟಿಯಾದ ಪರಿಣಾಮ ಸೈನಿಕರೊಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಒಂಬತ್ತು ಸೇನಾ ಸಿಬ್ಬಂದಿ ಸೇರಿದಂತೆ 13 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ನಾಲ್ವರು ನಾಗರಿಕರು ಸೇರಿದಂತೆ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ.

ಕುಲ್ಗಾಮ್‌ನ ಡಿಎಚ್ ಪೋರಾ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಕಾರ್ಯಾಚರಣೆಯ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಸೇನೆಯ ಶ್ರೀನಗರ ಮೂಲದ 15 ಕಾರ್ಪ್ಸ್ ತಿಳಿಸಿದೆ.

ಜಮ್ಮು- ಕಾಶ್ಮೀರದಲ್ಲಿ ಉಗ್ರದ ದಾಳಿ ಮುಂದುವರಿಕೆ

ಜಮ್ಮು ಮತ್ತು ಕಾಶ್ಮೀರ (Jammu and Kashmir)ದ ಗುಲ್‌ಮಾರ್ಗ್‌ (Gulmarg)ನ ಬೋಟಪತ್ರಿ (Botapathri)ಯಲ್ಲಿ ಗುರುವಾರ (ಅಕ್ಟೋಬರ್‌ 24) ಸಂಜೆ ಸೇನಾ ವಾಹನದ ಮೇಲೆ ದಾಳಿ ನಡೆದಿದ್ದು, ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಮೃತರಲ್ಲಿ ಇಬ್ಬರು ಸೈನಿಕರು ಮತ್ತು ಇಬ್ಬರು ನಾಗರಿಕ ಪೋರ್ಟರ್‌ಗಳು ಸೇರಿದ್ದಾರೆ. ಈ ವಾಹನವು 18 ರಾಷ್ಟ್ರೀಯ ರೈಫಲ್ಸ್ (Rashtriya Rifles)ಗೆ ಸೇರಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

ಪುಲ್ವಾಮ ಜಿಲ್ಲೆಯಲ್ಲಿ ಉಗ್ರನ ಗುಂಡಿನ ದಾಳಿಗೆ ಉತ್ತರ ಪ್ರದೇಶದ ಕಾರ್ಮಿಕನೊಬ್ಬ ಗಾಯಗೊಂಡ ಕೆಲವೇ ಹೊತ್ತಿನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ತ್ರಾಲ್‌ ಪ್ರದೇಶದಲ್ಲಿ ಗುರುವಾರ ಉಗ್ರರು ದಾಳಿ ನಡೆಸಿದ್ದರು. ಪರಿಣಾಮವಾಗಿ ಉತ್ತರ ಪ್ರದೇಶ ಮೂಲದ ಕಾರ್ಮಿಕನೊಬ್ಬ ಗಾಯಗೊಂಡಿದ್ದಾನೆ. ಗಾಯಗೊಂಡವನ್ನು ಬಿಜ್ನೋರ್ ನಿವಾಸಿ ಶುಭಂ ಕುಮಾರ್ ಎಂದು ಗುರುತಿಸಲಾಗಿದೆ. ಬಟಗುಂಡ್ ಗ್ರಾಮದಲ್ಲಿ ಭಯೋತ್ಪಾದಕರು ಆತನ ಮೇಲೆ ಗುಂಡು ಹಾರಿಸಿದ್ದು, ತೋಳಿಗೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಭಂ ಕುಮಾರನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆತ ಚೇತರಿಸುತ್ತಿದ್ದಾನೆ ಎಂದು ತಿಳಿದು ಬಂದಿದೆ. ಕಳೆದ ಒಂದು ವಾರದ ಅವಧಿಯಲ್ಲಿ ಕಾಶ್ಮೀರದಲ್ಲಿ ಸ್ಥಳೀಯರಲ್ಲದ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ನಡೆಸಿದ ಮೂರನೇ ದಾಳಿ ಇದಾಗಿದೆ.

ಇದನ್ನೂ ಓದಿ: J&K news : ಹೆಜ್ಬುಲ್ಲಾದ ಹಸನ್ ನಸ್ರಲ್ಲಾ ಹತ್ಯೆ ವಿರೋಧಿಸಿ ಕಾಶ್ಮೀರದ ಶ್ರೀನಗರದಲ್ಲಿ ಪ್ರತಿಭಟನೆ

ಗಂದರ್‌ಬಾಲ್ ಜಿಲ್ಲೆಯ ಸುರಂಗ ನಿರ್ಮಾಣ ಸ್ಥಳದಲ್ಲಿ ಭಾನುವಾರ (ಅಕ್ಟೋಬರ್‌ 20) ನಡೆದ ಭಯೋತ್ಪಾದಕ ದಾಳಿಯಲ್ಲಿ 6 ಹೊರ ರಾಜ್ಯದ ಕಾರ್ಮಿಕರು ಮತ್ತು ಸ್ಥಳೀಯ ವೈದ್ಯರೊಬ್ಬರು ಮೃತಪಟ್ಟಿದ್ದರು. ಅಮೆರಿಕ ನಿರ್ಮಿತ M4 ಕಾರ್ಬನ್‌ ಮತ್ತು AK 47 ಶಸ್ತ್ರ ಹಿಡಿದು ಕಾರ್ಮಿಕರ ವಸತಿ ಪ್ರದೇಶಕ್ಕೆ ನುಗ್ಗಿದ ಎರಡು ಭಯೋತ್ಪಾದಕರು ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದರು.

ಭಯೋತ್ಪಾದಕರು ನಡೆಸಿದ ದಾಳಿಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೃತರು ಶ್ರೀನಗರ-ಸೋನಾಮಾರ್ಗ್ ಹೆದ್ದಾರಿಯಲ್ಲಿನ ಜಡ್‌ ಮೊರ್ಚ್‌ ( Z- Morh) ಸುರಂಗ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಎಪಿಸಿಒ (APCO) ಇನ್ಫ್ರಾಟೆಕ್ ಕಂಪನಿಯ ಉದ್ಯೋಗಿಗಳಾಗಿದ್ದರು. ಕಾರ್ಮಿಕರ ವಸತಿ ಪ್ರದೇಶವು ಸುರಂಗದ ಮಾರ್ಗದ ಕೆಳಗೆ ಒಂದು ಬದಿಯಲ್ಲಿ ಬಂಜರು ಪರ್ವತಗಳು ಮತ್ತು ಇನ್ನೊಂದು ಬದಿಯಲ್ಲಿ ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯಿಂದ ಸುತ್ತುವರಿದಿತ್ತು. ಹೀಗಾಗಿ ಉಗ್ರರು ಭದ್ರತಾ ಪಡೆಯ ಕಣ್ಣು ತಪ್ಪಿಸಿ ಒಳನುಗ್ಗಲು ಅನುಕೂಲವಾಯಿತು ಎಂದು ಹೇಳಲಾಗುತ್ತಿದೆ.