ಮುಂಬೈ: ಮುಂಬೈನ ಮಾಲ್ವೊಂದರಲ್ಲಿ ಗುರುವಾರ ರಾತ್ರಿ ಕಾಣಿಸಿಕೊಂಡ ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಮುನ್ನಚ್ಚರಿಕೆ ಕ್ರಮವಾಗಿ ಮಾಲ್ ಪಕ್ಕದ ಕಟ್ಟಡದಿಂದ 3500 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.
ಮಾಲ್ನ ಎರಡನೇ ಅಂತಸ್ತಿನಲ್ಲಿದ್ದ ಮೊಬೈಲ್ ಅಂಗಡಿಯೊಂದರಲ್ಲಿ ಗುರುವಾರ ರಾತ್ರಿ ಕಾಣಿಸಿಕೊಂಡ ಬೆಂಕಿ ಇಡೀ ಕಟ್ಟಡ ವನ್ನು ಬೆಂಕಿ ಆವರಿಸುತ್ತಾ ಹೋಗಿದೆ. ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಇಬ್ಬರು ಅಗ್ನಿಶಾಮಕ ಸಿಬ್ಬಂದಿಗೆ ಗಾಯ ಗಳಾದವು ಎಂದು ಬೃಹನ್ ಮುಂಬೈ ಪಾಲಿಕೆಯ ಮೂಲಗಳು ತಿಳಿಸಿವೆ.
24 ಅಗ್ನಿಶಾಮಕ ಯಂತ್ರಗಳು ಮತ್ತು 16 ಜಂಬೊ ಟ್ಯಾಂಕರ್ಗಳು ಸೇರಿದಂತೆ ಸುಮಾರು 50 ಅಗ್ನಿಶಾಮಕ ವಾಹನಗಳು ಸ್ಥಳ ದಲ್ಲೇ ಬೀಡು ಬಿಟ್ಟು ಬೆಂಕಿ ಆರಿಸುವ ಕಾರ್ಯದಲ್ಲಿ ತೊಡಗಿಕೊಂಡಿವೆ. 250 ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳದಲ್ಲಿದ್ದಾರೆ ಎಂದು ಬೃಹನ್ ಮುಂಬೈ ಪಾಲಿಕೆ ತಿಳಿಸಿದೆ. ಮುಂಬೈ ಮೇಯರ್ ಕಿಶೋರಿ ಪೆಡ್ನೆಕರ್ ಸ್ಥಳಕ್ಕೆ ಭೇಟಿ ನೀಡಿ ಅಗ್ನಿಶಾಮಕ ಕಾರ್ಯಾಚರಣೆಯನ್ನು ಪರಿಶೀಲಿಸಿದರು.