Thursday, 12th December 2024

ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಪತ್ರಕರ್ತರ ಬಂಧನ

ಖನೌ: ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ರಾಜ್ಯ ಸಚಿವರ ಕಾರ್ಯಕ್ರಮದ ವೇಳೆ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ಶಾಂತಿ ಕದಡಿದ್ದಾರೆ ಎಂದು ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ದೂರು ನೀಡಿದ ನಂತರ ಪೊಲೀಸರು ಪತ್ರಕರ್ತರೊಬ್ಬರನ್ನು ಬಂಧಿಸಿದ್ದಾರೆ.

ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಪತ್ರಕರ್ತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಜಾಮೀನು ನೀಡಲಾಗಿದೆ.

ಅಭಿವೃದ್ಧಿ ಕಾರ್ಯಗಳ ಕುರಿತು ಮಾಧ್ಯಮಿಕ ಶಿಕ್ಷಣ ಖಾತೆ ರಾಜ್ಯ ಸಚಿವ (ಸ್ವತಂತ್ರ) ಗುಲಾಬ್ ದೇವಿ ಅವರನ್ನು ಪ್ರಶ್ನಿಸಿದ ನಂತರ ಪತ್ರಕರ್ತ ಸಂಜಯ್ ರಾಣಾ ಅವರನ್ನು ಬಂಧಿಸಲಾಗಿದೆ.

ಮಾ. 11 ರಂದು ಬುಧನಗರ ಖಾಂಡ್ವಾ ಗ್ರಾಮದಲ್ಲಿ ನಡೆದ ಚೆಕ್‌ಡ್ಯಾಮ್ ಶಂಕುಸ್ಥಾಪನೆ ಸಮಾರಂಭದಲ್ಲಿ ಗುಲಾಬ್ ದೇವಿ ಭಾಗವಹಿಸಿದ್ದಾಗ ಪತ್ರಕರ್ತರು ಅನೇಕ ಭರವಸೆಯ ಯೋಜನೆಗಳ ಅನುಷ್ಠಾನದ ಕೊರತೆಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಕೇಳಿದರು. ಇದರ ವಿಡಿಯೋ ವೈರಲ್​ ಆಗಿದೆ.

ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಗುಲಾಬ್ ದೇವಿ, “ನೀವು ಹೇಳಿರುವ ಎಲ್ಲಾ ವಿಷಯಗಳು ಸರಿಯಾಗಿವೆ ಆದರೆ ಇನ್ನೂ ಸಮಯವಿದೆ, ಕುಂದನಪುರ ಗ್ರಾಮ ಮತ್ತು ಬುಧ್ ನಗರ ಖಾಂಡ್ವಾ ನನ್ನ ಜವಾಬ್ದಾರಿ ಎಂಬುದನ್ನು ಮರೆಯಬೇಡಿ. ನಾನು ಹೇಳಿರುವ ಎಲ್ಲಾ ಕೆಲಸಗಳನ್ನು ಮಾಡುತ್ತೇನೆ ಎಂದರು.

ಆದರೆ ಕಾರ್ಯಕ್ರಮದ ನಂತರ, ಸ್ಥಳೀಯ ಬಿಜೆಪಿ ಮುಖಂಡ ಶುಭಂ ರಾಘವ್ ಅವರು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಸಂಜಯ್ ರಾಣಾ ವಿರುದ್ಧ ಚಂದೌಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.