ನವದೆಹಲಿ: ಜಮ್ಮು – ಕಾಶ್ಮೀರ ರಾಜ್ಯಕ್ಕೆ ನೀಡಿದ್ದ 370ನೇ ವಿಧಿ ರದ್ದತಿ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ತೀರ್ಪು ಡಿ.11ರಂದು ಹೊರ ಬೀಳಲಿದೆ.
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ಕುರಿತ ವಿಚಾರಣೆ ಪೂರ್ಣ ಗೊಳಿಸಿದ್ದ ಕೋರ್ಟ್, ಸೆಪ್ಟೆಂಬರ್ 5ರಂದು ತೀರ್ಪು ಕಾಯ್ದಿರಿಸಿತ್ತು.
ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್, ಸಂಜೀವ್ ಖನ್ನಾ, ಬಿ ಆರ್ ಗವಾಯಿ ಮತ್ತು ಸೂರ್ಯ ಕಾಂತ್ ಅವರನ್ನೊಳಗೊಂಡ ಐವರು ನ್ಯಾಯಮೂರ್ತಿಗಳ ಪೀಠ, ಈ ಸಂಬಂಧ ಸತತವಾಗಿ 16 ದಿನಗಳ ಕಾಲ ವಾದ- ಪ್ರತಿವಾದಗಳನ್ನು ಆಲಿಸಿತ್ತು. ಸುದೀರ್ಘ ವಿಚಾರಣೆ ಕೈಗೊಂಡಿತ್ತು. ಹಿರಿಯ ವಕೀಲರಾದ ಕಪಿಲ್ ಸಿಬಲ್, ರಾಜೀವ್ ಧವನ್, ಗೋಪಾಲ್ ಸುಬ್ರಮಣಿಯಂ, ದುಷ್ಯಂತ್ ದವೆ, ಜಾಫರ್ ಷಾ, ಗೋಪಾಲ್ ಶಂಕರನಾರಾಯಣನ್ ಅರ್ಜಿದಾರರ ಪರ ತಮ್ಮ ಪ್ರಬಲ ವಾದಗಳನ್ನು ಮಂಡಿಸಿದ್ದರು.
ಇನ್ನು ಸರ್ಕಾರದ ಪರ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿವಾದ ಮಂಡಿಸಿದ್ದರು.